ಜಿಲ್ಲೆ

ಸೈಕಲ್ ಏರಿ ದೇಶ ಪರ್ಯಟನೆ

ಕಾರವಾರ: ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಸಾರುವ ಸಲುವಾಗಿ ಯುವತಿಯೊಬ್ಬಳು ಏಕಾಂಗಿಯಾಗಿ ಸೈಕಲ್ ಮೇಲೆ ದೇಶ ಪರ್ಯಟನೆ ಹೊರಟಿದ್ದಾಳೆ.
ಮಧ್ಯಪ್ರದೇಶ ಮೂಲದ ಆಶಾ ಮಾಲ್ವಿ ಈ ಸಾಹಸಕ್ಕೆ ಕೈ ಹಾಕಿದವರು. ಬಿಪಿಎಡ್ ಮಾಡಿ ಸ್ನಾತಕೋತ್ತರ ಪದವಿ ಕೂಡ ಪಡೆದಿರುವ ಅವರು ನವೆಂಬರ್ 1ರಿಂದ ತಮ್ಮ ಊರಿನಿಂದ ಸೈಕಲ್ ಏರಿ ದೇಶ ಪರ್ಯಟನೆಗೆ ಹೊರಟಿದ್ದಾರೆ. ಇದುವರೆಗೆ ಗುಜರಾತ್, ದೀಯು ದಮನ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸುಮಾರು 3700 ಕಿಮೀ ಸಂಚರಿಸಿ ಶನಿವಾರ ಕಾರವಾರ ತಲುಪಿದ್ದಾರೆ. ಹೋದ ಊರುಗಳಲ್ಲಿ ಅವರು ಶಾಲೆ ಮತ್ತು ಕಾಲೇಜ್​ಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಉಪನ್ಯಾಸ ನೀಡುತ್ತಾರೆ. ಗೋವಾ, ಮಹಾರಾಷ್ಟ್ರ ಸಿಎಂ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಾಧನೆಯ ಗುರಿ: ನನಗೆ ಅಮ್ಮ ಮತ್ತು ತಂಗಿ ಮಾತ್ರ ಇದ್ದಾರೆ. ಅಮ್ಮ ಕೂಲಿ ಮಾಡಿ ನನ್ನನ್ನು ಓದಿಸಿದರು. ನಾವು ಹೇಗೆ ಬೆಳೆದಿದ್ದೇವೆ ಎಂಬುದು ಮುಖ್ಯವಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬುದು ಅಮ್ಮನ ಆಸೆ, ಇದರಿಂದ 20 ಸಾವಿರ ಕಿಮೀಗಳ ಭಾರತ ಸೈಕಲ್ ಯಾತ್ರೆಯನ್ನು ಯೋಜಿಸಿದ್ದೇನೆ. ಕನ್ಯಾಕುಮಾರಿ ತಲುಪಿ ಅಲ್ಲಿಂದ ದೆಹಲಿಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುಮು ಅವರನ್ನು ಭೇಟಿಯಾಗುವ ಗುರಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.
ಭದ್ರತೆ: ಕಾರವಾರಕ್ಕೆ ಆಗಮಿಸಿದ ಆಶಾ ಅವರನ್ನು ತಹಸೀಲ್ದಾರ್ ನಿಶ್ಚಲ ನರೋನಾ ಸ್ವಾಗತಿಸಿದರು. ಅವರಿಗೆ ಇಬ್ಬರು ಮಹಿಳಾ ಹಾಗೂ ಇಬ್ಬರು ಪುರುಷ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ. ಅವರು ರಾಜ್ಯದಲ್ಲಿ ಸಂಚರಿಸುವವರೆಗೂ ಆಯಾ ವ್ಯಾಪ್ತಿಯ ಪೊಲೀಸರು ಭದ್ರತೆ ಒದಗಿಸುವರು.