ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಭಾರತದ ಪರಮ ಧರ್ಮವೇ ಸೇವೆಯಾಗಿದೆ. ಈ ಸೇವಾ ಮನೋಭಾವನೆಯೇ ನಮ್ಮ ರಾಷ್ಟ್ರವನ್ನು ಜೋಡಿಸಿದೆ. ಇಂಡಿಯಾ ಈಗ ಭಾರತವಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ವಿಶ್ವದ ದೊಡ್ಡಣ್ಣ ಅಂದುಕೊಂಡವರೆಲ್ಲ ಈಗ ನಮ್ಮ ದೇಶದತ್ತ ಕೃತಜ್ಞತೆಯಿಂದ ನೋಡುತ್ತಿದ್ದಾರೆ ಎಂದು ಆರ್ಎಸ್ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ಇಲ್ಲಿಯ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ಹಾಗೂ ಟ್ರಾಮಾದ ದಶಮಾನೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸೇವೆ, ಸಹಾನುಭೂತಿ ಎನ್ನುವುದು ಭಾರತದ ಹೆಗ್ಗುರಾತಾಗಿದೆ. ಸ್ವಂತ ಜೀವನದಲ್ಲಿ ಯಾರೇ ಆಗಲಿ ಧನ್ಯತಾ ಭಾವ ಪಡೆಯಲು ಮಾಡುವ ಕರ್ತವ್ಯವು ಸೇವೆ ಎನಿಸಿಕೊಳ್ಳುತ್ತದೆ. ಈ ದೇಶದ ಮಣ್ಣಿನಲ್ಲಿ ಜೀವನ ಮೌಲ್ಯ ಅರಳುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಕಳೆದ 20 ವರ್ಷದಲ್ಲಿ ಹುಬ್ಬಳ್ಳಿ ಮಹಾನಗರಕ್ಕೆ ಹಲವು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಬಂದಿವೆ. ಅನೇಕ ತಜ್ಞ ವೈದ್ಯರು ಇಲ್ಲಿದ್ದಾರೆ. ಅವಳಿನಗರದ ಜನರು ಈ ವಿಷಯದಲ್ಲಿ ಅದೃಷ್ಟವಂತರು. ದೂರದ ಊರಿಗೆ ಹೋಗಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಕಷ್ಟವನ್ನು ಇವರೆಲ್ಲ ದೂರವಾಗಿಸಿದ್ದಾರೆ ಎಂದರು.
ಅಭಿವೃದ್ಧಿಪರ ಆಲೋಚನೆ ಇದ್ದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರಿಗೆ ಸೇವೆ ಒದಗಿಸಲು ಸಾಧ್ಯ. ಈ ದಿಸೆಯಲ್ಲಿ ಡಾ. ದೇವಿಶೆಟ್ಟಿ, ಡಾ. ಪ್ರಭಾಕರ ಕೋರೆ ಅವರಂಥ ಮಹನೀಯರು ಕಾರ್ಯಪ್ರವೃತ್ತರಾಗಿದ್ದಾರೆ. ಅವರು ಸದಾ ಪ್ರಗತಿಪರ ಆಲೋಚನೆಯಲ್ಲಿರುತ್ತಾರೆ. ಅತ್ಯುತ್ತಮ ನರರೋಗ ಚಿಕಿತ್ಸಾ ಕೇಂದ್ರ ತೆರೆಯುವ ಮೂಲಕ ಡಾ. ಕ್ರಾಂತಿಕಿರಣ ಅವರು ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ವೈದ್ಯ ವೃತ್ತಿಗೆ ಸಾಕಷ್ಟು ತಾಳ್ಮೆ, ಸಹನೆ, ಪರಿಶ್ರಮ ಬೇಕಾಗುತ್ತದೆ. ಅಂತಹ ಗುಣಗಳನ್ನು ಇವರು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
ದಶಕದಿಂದ ಬಾಲಾಜಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಅವರು, 104 ಬೆಡ್ನ ಸುಸಜ್ಜಿತ ಆಸ್ಪತ್ರೆ ಇದೀಗ ಸಕಲ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಗುಣಮಟ್ಟದ ಸೇವೆ ಮೂಲಕ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ವಣಕ್ಕಾಗಿ ಶಕ್ತಿಮೀರಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅವಳಿನಗರದ ವೈದ್ಯರು, ಅನೇಕ ಗಣ್ಯರು ಡಾ. ಕ್ರಾಂತಿಕಿರಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಗೋ.ಹ. ನರೇಗಲ್ಲ, ಅಭಿನಯ ಆನಂದ, ಗದಗಕರ, ಸುರೇಶರಾವ್, ಗೋವಿಂದಗೌಡ, ಶ್ರೀಧರ ನಾಡಗೇರ, ಇತರರು ಉಪಸ್ಥಿತರಿದ್ದರು. ಸೌಮ್ಯ, ಗಂಗಾ ಅವರು ಪ್ರಾರ್ಥನೆ ಹಾಡಿದರು. ವಿನಾಯಕ ತಲಗೇರಿ ಕಾರ್ಯಕ್ರಮ ನಿರೂಪಿಸಿದರು. ಬೋರಗಾಯಿ ಅವರು ವಂದಿಸಿದರು.