ಮೈಸೂರು: ಸುತ್ತೂರು ಶ್ರೀಮಠಕ್ಕೆ ಬಹುಮುಖಿ ಆಯಾಮ ನೀಡಿ, ಜಗತ್ತಿನಾದ್ಯಂತ ಬೆಳೆಯಲು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಹೇಳಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ಇಡೀ ಬದುಕನ್ನು ಸೇವೆಗಾಗಿ ಮುಡಿಪಾಗಿಟ್ಟ ರಾಜೇಂದ್ರ ಶ್ರೀಗಳ ಜೀವನ, ವ್ಯಕ್ತಿತ್ವದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಶ್ರೀಗಳ ಜೀವನದ ಪ್ರತಿಯೊಂದು ಘಟನೆಗಳು ಅವರ ಜೀವನ ಸಂದೇಶ ಸಾರುತ್ತವೆ. ಅವಕಾಶಕ್ಕಾಗಿ ಕಾಯದೆ, ಅವಕಾಶವನ್ನು ಉಳಿಸಿಕೊಂಡು ಹೋಗುವವನು ಸರ್ವಶ್ರೇಷ್ಠ ಮಾನವ. ಅಂತಹ ಶ್ರೇಷ್ಠರಲ್ಲಿ ಶ್ರೇಷ್ಠ, ಅಗ್ರಮಾನ್ಯರಲ್ಲಿ ರಾಜೇಂದ್ರ ಶ್ರೀಗಳೂ ಒಬ್ಬರು ಎಂದರು.
1954ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿ ತ್ರಿವಿಧ ದಾಸೋಹವನ್ನು ಪಸರಿಸಲು ಕಾರಣರಾದರು. ಮಾನವನಾಗಿ ಹುಟ್ಟುವುದು ವಿಶೇಷ, ಮಾನವನಾಗಿ ಹುಟ್ಟಿ ಸೇವೆ ಮಾಡುವುದು ಇನ್ನೂ ಶ್ರೇಷ್ಠ ಎಂದು ಶ್ರೀಗಳು ನಂಬಿದ್ದರು. ಅವರ ನುಡಿ ನಮಗೆ ಉಸಿರಾಗಬೇಕು. ಅವರ ಬೋಧನೆ ನಮಗೆ ದಾರಿದೀಪವಾಗಬೇಕು. ಅವರ ನಡೆ ನಮಗೆ ಬದುಕಾಗಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಪ್ರೊ.ಮೊರಬದ ಮಲ್ಲಿಕಾರ್ಜುನ, ಪುಟ್ಟಸುಬ್ಬಪ್ಪ, ಶಿವಶಂಕರಪ್ಪ ಇನ್ನಿತರರು ಇದ್ದರು.