ಹೂವಿನಹಡಗಲಿ: ಡಾ.ಬಾಬು ಜಗಜೀವನರಾಮ್ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕತೆ ಬಳಸಲು ಪ್ರೋತ್ಸಾಹ ನೀಡಿದರು. ಅವರ ಬದುಕು ನಮಗೆ ಆದರ್ಶವಾಗಬೇಕು ಎಂದು ತಾಪಂ ಇಒ ಉಮೇಶ್ ಮೈನಹಳ್ಳಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶವನ್ನು ಡಾ.ಬಾಬು ಜಗಜೀವನರಾಮ್ ಸಾರಿದರು ಎಂದು ತಿಳಿಸಿದರು.
ಸಮಾಜ ಸುಧಾರಣೆಯೊಂದಿಗೆ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಬಯಸುತ್ತಿದ್ದರು. ದೇಶದ ಜನರು ಆಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿಗೆ ಕಾರಣವಾದರು ಎಂದು ಉಮೇಶ ಮೈನಹಳ್ಳಿ ತಿಳಿಸಿದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ ಡಾ.ಬಾಬು ಜಗಜೀವನರಾಮ್ ಅವರ ಕುರಿತು ಉಪನ್ಯಾಸ ನೀಡಿದರು. ವಕೀಲ ಪೂಜಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ, ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಉಚ್ಚೆಂಗೆಪ್ಪ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ನಿಂಗಪ್ಪ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಜಿ.ಗುಡದಯ್ಯ, ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಬಿ.ಆನಂದ ಇತರರಿದ್ದರು.