ಹುಬ್ಬಳ್ಳಿ: ಸೇವಾಭಾರತಿ ಟ್ರಸ್ಟ್, ಮಾತೃಛಾಯಾ ಕಲ್ಯಾಣ ಕೇಂದ್ರದ ವತಿಯಿಂದ ಇಲ್ಲಿನ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೇವಾ ಭಾರತಿ ಮಾತೃಛಾಯಾ ಮಕ್ಕಳೊಂದಿಗೆ ಶನಿವಾರ ರಕ್ಷಾ ಬಂಧನ ಉತ್ಸವ ಆಚರಿಸಲಾಯಿತು.
ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಮಾತನಾಡಿ, ರಕ್ಷೆಯು ಕರ್ತವ್ಯ, ರಾಷ್ಟ್ರಪ್ರೇಮ, ಏಕತೆ, ಸಮಾನತೆ, ಸಹಯೋಗದ ಸಂದೇಶ ಕೊಡುತ್ತದೆ. ನಾವೆಲ್ಲ ಒಟ್ಟಾಗಿ ಸಮಾಜದಲ್ಲಿ ಇರಬೇಕು. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸಬೇಕು. ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು.
ರಕ್ಷಾ ಬಂಧನ ಹಬ್ಬದಿಂದ ಸಹೋದರತ್ವ, ಸ್ನೇಹ, ಬಾಂಧವ್ಯ ಬೆಳೆಯಲಿದೆ. ಕಲಿಯುಗದಲ್ಲಿ ಅಣ್ಣ-ತಂಗಿಯರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿ. ಇಂದಿನ ಯುವಕರು ಎಲ್ಲ ಹೆಣ್ಣುಮಕ್ಕಳನ್ನು ಸಹೋದರಿ ಎಂಬ ಭಾವನೆಯಿಂದ ನೋಡಿಕೊಂಡು ಅವರ ರಕ್ಷಣೆಗೆ ಕಂಕಣ ಬದ್ಧರಾಬೇಕು ಎಂದು ತಿಳಿಸಿದರು.
ಪಾಲಿಕೆ ಸದಸ್ಯೆ ಉಮಾ ಮುಕುಂದ ಅಧ್ಯಕ್ಷತೆ ವಹಿಸಿದ್ದರು, ಸೇವಾ ಭಾರತಿ ಮಾತಾಜಿ ರತ್ನಾ ಪವಾಡಶೆಟ್ಟಿ, ಬ್ರಾಹ್ಮಣ ಸಂಘದ ಮುಖಂಡ ಸುನಿಲ ಗುಮಾಸ್ತೆ, ವಿನೋದ ಪಟ್ವಾ, ಶ್ರೀನಿವಾಸ ಕಟ್ಟಿಮನಿ, ನಿಖಿಲ್ ವಾಂಘಿ, ಮಧುರಾ ಎಸ್ಟೇಟ್ ಮಹಿಳಾ ಮಂಡಳ ಸದಸ್ಯರು ಮತ್ತು ಸ್ವಚ್ಛತಾ ಆಭಿಯಾನದ ಸದಸ್ಯರು ಉಪಸ್ಥಿತರಿದ್ದರು.