ಜಿಲ್ಲೆ

ಸೇವಾ ಮನೋಭಾವದಿಂದ ಕೆಲಸ ಮಾಡಿ: ಡಾ.ಡಿ.ತಿಮ್ಮಯ್ಯ

ಮೈಸೂರು: ಸರ್ಕಾರಿ ನೌಕರಿ ಇರಲಿ ಅಥವಾ ಖಾಸಗಿ ನೌಕರಿ ಇರಲಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್ ಸಹಯೋಗದಲ್ಲಿ ಮಹಾರಾಜ ಕಾಲೇಜು ಹೊಸ ಕಟ್ಟಡದಲ್ಲಿ ಸೋಮವಾರ ಆಯೋಜಿಸಿದ್ದ ಡಿ.ಶಿವಣ್ಣ, ಪ್ರೊ.ಎಚ್.ಕಮಲಾ, ಡಾ.ಪಿ. ಕೃಷ್ಣಯ್ಯ, ಡಾ.ಆರ್.ಸಿದ್ದರಾಜು, ಗೌರಮ್ಮ ಅವರ ಬೀಳ್ಕೊಡುಗೆ, ಮೈವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಶಬ್ಬೀರ್ ಮುಸ್ತಫಾ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದಿಲ್ಲ. ಶೇ.1ರಿಂದ 5ರಷ್ಟು ಜನರಿಗೆ ಮಾತ್ರ ಆ ಅದೃಷ್ಟ ಸಿಗುತ್ತದೆ. ಅದಕ್ಕೆ ಅವರ ಪರಿಶ್ರಮ ಕೂಡ ಇರುತ್ತದೆ. ಈ ರೀತಿ ಕೆಲಸ ಪಡೆದವರು ಸಕಾರಾತ್ಮಕ ಧೋರಣೆಯೊಂದಿಗೆ ಸಮಾಜಕ್ಕೆ ನೆರವಾಗಬೇಕು ಎಂದರು.

ಕರ್ತವ್ಯಲೋಪ ಇಲ್ಲದೇ ಕೆಲಸ ಮಾಡಿದರೆ ವೃತ್ತಿ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಉದಾರತೆ, ಒಳ್ಳೆಯತನ ಮತ್ತು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರು ಹೊರಟಾಗ ಶಿಷ್ಯರೇ ಸಾರೋಟಿನಲ್ಲಿ ಕೂರಿಸಿ, ರೈಲ್ವೆ ನಿಲ್ದಾಣದವರೆಗೆ ಕರೆದುಕೊಂಡು ಹೋಗಿ ಬೀಳ್ಕೊಟ್ಟಿದ್ದು ಸದಾ ಸ್ಮರಣೆಯಲ್ಲಿ ಇರುತ್ತದೆ. ಈ ರೀತಿ ಆದರ್ಶಗಳಿರಬೇಕು ಎಂದರು.

ವಿಜಯನಗರ ಎಸಿಪಿ ಪಿ.ರವಿಪ್ರಸಾದ್ ಮಾತನಾಡಿ, ಮಹಾರಾಜ ಕಾಲೇಜಿಗೆ ದೊಡ್ಡ ಪರಂಪರೆ ಇದೆ. ನಾನು ಇದೇ ಕಾಲೇಜಿನ ವಿದ್ಯಾರ್ಥಿ. ನಮ್ಮ ಬ್ಯಾಚಿನ 27 ಜನ ಸಬ್ ಇನ್‌ಸ್ಪೆಕ್ಟರ್‌ಗಳಾಗಿ ಆಯ್ಕೆಯಾದವು. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಗುರುಗಳ ಮಾರ್ಗದರ್ಶನ ಪಡೆದು ಮುಂದೆ ಬರಬೇಕು. ಮೊಬೈಲ್ ಬಿಡಿ, ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದಿ ಎಂದರು.

ಮೈವಿವಿ ಸಿಂಡಿಕೇಟ್ ಸದಸ್ಯ ಪ್ರೊ.ಶಬ್ಬೀರ್ ಮುಸ್ತಫಾ ಮಾತನಾಡಿ, ಪ್ರಸ್ತುತ ಉನ್ನತ ಶಿಕ್ಷಣದ ಪರಿಸ್ಥಿತಿ ಚೆನ್ನಾಗಿಲ್ಲ. ಶೇ.80ರಷ್ಟು ಜನರನ್ನು ಅತಿಥಿ ಉಪನ್ಯಾಸಕರಾಗಿಯೇ ದುಡಿಸಿಕೊಳ್ಳಲಾಗುತ್ತಿದೆ. ಇದರಿಂದ ಗುಣಾತ್ಮಕ ಶಿಕ್ಷಣ ಸಾಧ್ಯವಾಗಿಲ್ಲ. ಆದ್ದರಿಂದ ಇಂತಹ ವ್ಯವಸ್ಥೆಯನ್ನು ಪ್ರತಿಭಟಿಸಬೇಕು ಎಂದು ಹೇಳಿದರು.

ಮಹಾರಾಜ ಕಾಲೇಜಿನ ಅಧೀಕ್ಷಕರಾದ ಉಮೇಶಚಂದ್ರ, ವಿನೋದ್, ಬೇರೆಡೆಗೆ ವರ್ಗವಾದ ಚಂದ್ರಶೇಖರ್ ಹಾಗೂ ಹೇಮಂತಕುಮಾರ್ ಅವರನ್ನೂ ಸನ್ಮಾನಿಸಲಾಯಿತು.

ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಮುಖಂಡರಾದ ಭಾಸ್ಕರ್, ವಿನೋದ್, ಕೆ. ಗಣೇಶ್, ಚಿದಾನಂದ, ನವೀನ್, ಡಾ.ಟಿ.ಎಂ.ಸರಸ್ವತಿ, ಬಿ.ಎಸ್. ದಿನಮಣಿ ಇದ್ದರು.