ಜಿಲ್ಲೆ

ಸೇವಾ ಮನೋಭಾವ ಬೆಳೆಸುವುದು ಸೇವಾದಳದ ಉದ್ದೇಶ

ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ತಾಲೂಕು ಮಟ್ಟದ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಮನ್ವಯಾಧಿಕಾರಿ ಹೇಮಂತ್ ಮಾತನಾಡಿದರು. ಕರುಂಬಯ್ಯ, ಗೋಪಾಲ್, ಸುಕುಮಾರಿ ಇದ್ದರು.

ಸೋಮವಾರಪೇಟೆ: ಸೇವಾದಳದಲ್ಲಿ ಪ್ರತಿಫಲಾಫೇಕ್ಷೆಯಿಲ್ಲದೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಿಗೆ ಕ್ಷೇತ್ರ ಸಮನ್ವಯಾಧಿಕಾರಿ ಹೇಮಂತ್ ಸೂಚಿಸಿದರು.


ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಶುಕ್ರವಾರ ಭಾರತ ಸೇವಾದಳದ ಕೊಡಗು ಜಿಲ್ಲಾ ಘಟಕದಿಂದ ತಾಲೂಕು ಮಟ್ಟದ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಆಯೋಜಿಸಿದ್ದ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿ ಮೇಲೆ ಯುವಕರನ್ನು ಸಂಘಟಿಸಲು ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡಲಾಗುತ್ತಿದೆ. ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು, ಅವರಲ್ಲಿ ಸಂಯಮ, ಶಿಸ್ತು, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಸೇವಾ ಮನೋಭಾವ ಮೂಡಿಸುವುದು ಸೇವಾದಳದ ಪ್ರಮುಖ ಯೋಜನೆಯಾಗಿದೆ ಎಂದು ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಿತಿ ಅಧ್ಯಕ್ಷ ಕರುಂಬಯ್ಯ ಮಾತನಾಡಿ, ಕಳೆದ ಹಲವು ವರ್ಷಗಳಿಂದ ತಾಲೂಕಿನ ಹೆಚ್ಚಿನ ಶಾಲೆಗಳಲ್ಲಿ ಸೇವಾದಳದ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಕೋವಿಡ್ 19ರ ನಂತರ ಕೆಲವು ಶಾಲೆಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲ ಶಾಲೆಗಳಲ್ಲಿ ವಾರದಲ್ಲಿ ಕೇವಲ ಒಂದು ತರಗತಿಯನ್ನು ಸೇವಾದಳ ನಡೆಸಲು ಅವಕಾಶ ಮಾಡಿಕೊಟ್ಟರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.


ಕಾರ್ಯಾಗಾರದಲ್ಲಿ ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ಎಂ.ಪಿ.ಗೋಪಾಲ್, ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾದ ಸುಕುಮಾರಿ, ಸದಸ್ಯರಾದ ಮೀರ ಸುಮನ್ ಕ್ಯಾಸ್ತಲಿನ್ ಇದ್ದರು.