ಬಾಗಲಕೋಟೆ: ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಂಡು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ೧ ಮತ್ತು ೨ರ ಪ್ರಸಕ್ತ ಸಾಲಿನ ಚಟುವಟಿಕೆಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಮಾಜಮುಖಿ ಕಾರ್ಯಗಳನ್ನು ಕೈಕೊಳ್ಳಲು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು, ಎಲ್ಲರೊಡನೆ ಸಮನ್ವಯದಿಂದ ಕೆಲಸ ಮಾಡಲು ಎನ್.ಎಸ್.ಎಸ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಗಳಿಗೆ ಪರಿಚಯಿಸಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಇದರ ಆಶಯವಾಗಿದೆ. ನಿಸ್ವಾರ್ಥ ಸೇವೆಯಿಂದ ನೆಮ್ಮದಿ ಪಡೆಯಬಹುದು ಎಂದರು.
ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ದೊಡ್ಡದು. ಅವರು ತಮ್ಮ ಶಕ್ತಿ-ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಪರಿಸರ ಸ್ವಚ್ಛತೆ, ಶ್ರಮದಾನದಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಚ್.ಜಿ.ಗೌಡರ ಮಾತನಾಡಿ, ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ಏಳು ದಿನಗಳ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮಾಧಿಕಾರಿ ಎನ್.ಬಿ.ಹಸಬಿ ಸ್ವಾಗತಿಸಿದರು. ಉಪನ್ಯಾಸಕ ವೈ.ಎಚ್.ಗುಡೂರ ವಂದಿಸಿದರು. ಇದಕ್ಕೂ ಮೊದಲು, ವಿದ್ಯಾರ್ಥಿಗಳು ಶ್ರಮದಾನ ಮತ್ತು ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡರು.