ಬಸವಕಲ್ಯಾಣ ತಾಲೂಕಿನ ಮಂಠಾಳನಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಡಾ.ಶಿವಶರಣಪ್ಪ ಗೌಡಪ್ಪ, ಮಹಾದೇವ ಮಾಲಿ ಪಾಟೀಲ್, ರವೀಂದ್ರ ಶಾಯಪ್ಪ, ಡಾ.ರಾಜಶೇಖರ ಬಸನಾಯಕ, ಡಾ.ಎಚ್‌ಸಿ ಸೌಮ್ಯ, ಭೀಮಾ ಲೊಡ್ಡೆ, ಪುಷ್ಪರಾಜ ಹಾರಕೂಡೆ, ಸಾವಿತ್ರಿ ಗೌಡಪ್ಪ ಇದ್ದರು. 
ಜಿಲ್ಲೆ

ಸೇವಾ ಮನೋಭಾವ ಬೆಳೆಸಲು ಎನ್ನೆಸ್ಸೆಸ್ ಸಹಕಾರಿ

ಬಸವಕಲ್ಯಾಣ: ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಬೆಳೆಸುವ ಜತೆಗೆ ಸೇವಾ ಮನೋಭಾವ ಬೆಳೆಸಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ನುಡಿದರು

ಮಂಠಾಳ ಮಹಾದೇವ ಮಂದಿರದ ಪರಿಸರದಲ್ಲಿ ಭಾನುವಾರ ಆಯೋಜಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕಲಬುರಗಿಯ ಕೃಷಿ ಮವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಮತ್ತು ಎರಡರ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಯುವಕರು ತಂಬಾಕು ಸೇರಿ ಕೆಟ್ಟ ಚಟಗಳಿಗೆ ಆಕರ್ಷಿತರಾಗದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳವ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಶಿವಶರಣಪ್ಪ ಗೌಡಪ್ಪ ಮಾತನಾಡಿ, ಏಳು ದಿನಗಳ ಕಾಲ ಶಿಬಿರ ನಡೆಯಲಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನ ಜತೆಗೆ ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ ಶಿಬಿರ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಕಲಬುರಗಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ ಮಾತನಾಡಿ, ಅಧ್ಯಯನದ ಜತೆಗೆ ಸಮಾಜಪರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಾಸವಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಶಿಬಿರಗಳಲ್ಲಿ ಭಾಗವಹಿಸಿ ಶೃದ್ಧೆಯಿಂದ ಸೇವೆ ಮಾಡಬೇಕು ಎಂದು ಹೇಳಿದರು.

ಯುವ ಮುಖಂಡ ಮಹಾದೇವ ಮಾಲಿ ಪಾಟೀಲ್, ಪ್ರಾಚಾರ್ಯ ರವೀಂದ್ರ ಶಾಯಪ್ಪ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ರಾಜಶೇಖರ ಬಸನಾಯಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧಿಕಾರಿ ಡಾ.ಎಚ್‌ಸಿ ಸೌಮ್ಯ, ಪ್ರಮುಖರಾದ ಡಾ.ವಿ.ಎಸ್.ಮಠಪತಿ, ಶ್ರೀಕಾಂತ ಮಠಪತಿ, ಭೀಮಾ ಲೊಡ್ಡೆ, ಪುಷ್ಪರಾಜ ಹಾರಕೂಡೆ, ಶೈಲೇಂದ್ರ ಪಾಟೀಲ್, ಸಾವಿತ್ರಿ ಗೌಡಪ್ಪ ಇದ್ದರು.