ಶ್ರೀರಂಗಪಟ್ಟಣ: ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ 58ನೇ ಜನ್ಮ ದಿನದ ಪ್ರಯುಕ್ತ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಪುರಸಭೆ ಪ್ರ.ಅಧ್ಯಕ್ಷ ಎಂ.ಎಲ್.ದಿನೇಶ್ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಹಣ್ಣು, ಪೌಷ್ಟಿಕ ಆಹಾರಗಳ ಬುಟ್ಟಿಗಳನ್ನು ವಿತರಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಜನಿಕಾಂತ್ ಅವರೊಂದಿಗೆ ಜಮಾವಣೆಗೊಂಡ ಕಾರ್ಯಕರ್ತರು ಒಳ ಮತ್ತು ಹೊರ ರೋಗಿಗಳು, ಕರ್ತವ್ಯದಲ್ಲಿ ತೊಡಗಿದ್ದ ವೈದ್ಯಕೀಯ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಪೌಷ್ಟಿಕ ಆಹಾರಗಳ ಬುಟ್ಟಿಗಳನ್ನು ನೀಡಿದರು.
ಪುರಸಭೆ ಪ್ರ.ಅಧ್ಯಕ್ಷ ಎಂ.ಎಲ್.ದಿನೇಶ್ ಮಾತನಾಡಿ, ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ತಮ್ಮ ಸರಳ ನಡತೆಯಿಂದಲೇ ಎಲ್ಲೆಡೆ ಜನರ ವಿಶ್ವಾಸಗಳಿಸಿ ಕ್ಷೇತ್ರದ ನಾಯಕತ್ವದೊಂದಿಗೆ ಮನೆ ಮಾತಾಗಿದ್ದಾರೆ. ಶ್ರೀರಂಗಪಟ್ಟಣ ಮಾತ್ರವಲ್ಲದೆ ಕ್ಷೇತ್ರ ವ್ಯಾಪ್ತಿಯಲ್ಲಿ ಅವರ ಜನ್ಮದಿನವನ್ನು ಹಬ್ಬದಂತೆ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷಾತೀತವಾಗಿ ಆಚರಿಸುತ್ತಿದ್ದಾರೆ. ಅವರ ಅಭಿಮಾನಿಗಳು ಬಡವರಿಗೆ ಅನ್ನದಾನ, ವಸ್ತ್ರದಾನ, ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ವಿಶೇಷವಾಗಿ ಆಚರಿತ್ತಿದ್ದಾರೆ ಎಂದರು.
ಶಾಸಕರ ಮುಂದಾಲೋಚನೆಯ ಫಲವಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಇನ್ನು ಒಂದು ವರ್ಷಗಳ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯ ಶ್ರೀರಂಗಪಟ್ಟಣ ಹಾಗೂ ಗಂಜಾಂ ಅಭಿವೃದ್ಧಿಗೊಳಿಸುವಲ್ಲಿ ಶಾಸಕರು ಅತ್ಯಂತ ಗಣನೀಯ ಪಾತ್ರವಹಿಸಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ವಾರ್ಡ್‌ಗಳು, ಮುಖ್ಯ ರಸ್ತೆಗಳು, ಚರಂಡಿ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಬೀದಿ ದೀಪಗಳು, ಪಾದಚಾರಿ ರಸ್ತೆಗಳ ನಿರ್ಮಾಣ, ಸೈಕಲ್ ಪಾಥ್, ಉದ್ಯಾನವನಗಳು ಹಾಗೂ ಪ್ರಮುಖ ವೃತ್ತಗಳ ಅಭಿವೃದ್ಧಿಯೊಂದಿಗೆ ಶ್ರೀರಂಗಪಟ್ಟಣದ ಸೌಂದರ್ಯಕ್ಕೆ ಮೆರುಗು ನೀಡುವಲ್ಲಿ ಕಾರಣಕರ್ತರಾಗಲಿದ್ದಾರೆ. ಪಟ್ಟಣ ವ್ಯಾಪ್ತಿಯ ಎಲ್ಲ ಪ್ರವಾಸಿ ತಾಣಗಳ ಅಭಿವೃದ್ಧಿ ಜತೆಗೆ ಶ್ರೀರಂಗಪಟ್ಟಣ ಹಾಗೂ ಗಂಜಾಂನ ವಿವಿಧ ದೇಗುಲಗಳ ಜೀರ್ಣೋದ್ಧಾರ ಹಾಗೂ ಗರಡಿ ಮನೆಗಳ ದುರಸ್ತಿಗಾಗಿ 70 ಲಕ್ಷ ರೂ.ಗೂ ಅಧಿಕವಾಗಿ ಅನುದಾನ ನೀಡಿದ್ದಾರೆ. ಶಕ್ತಿ ದೇವತೆ ನಿಮಿಷಾಂಬ ದೇಗುಲಕ್ಕೆ ಸುಗಮ ಸಂಚಾರ ಕಲ್ಪಿಸಲು ಬೆಂ-ಮೈ ಎಕ್ಸ್‌ಪ್ರೆಸ್ ಹೆದ್ದಾರಿಯ ಸರ್ವೀಸ್ ರಸ್ತೆಯಿಂದ ನೇರ ಸಂಪರ್ಕ ರಸ್ತೆ ಶೀಘ್ರ ನಿರ್ಮಿಸಲಾಗುತ್ತಿದೆ. ಅವರ ಕೊಡುಗೆಗಳನ್ನು ಸ್ಮರಿಸಬೇಕಿದೆ ಎಂದರು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಜನಿಕಾಂತ್ ಮಾತನಾಡಿ, ನಾವು ಮಾಡುವ ಕೆಲಸ ಮತ್ತು ಸೇವೆ ಅನ್ಯರು ಮೆಚ್ಚುವುದಕ್ಕಿಂತ ನಮ್ಮ ಆತ್ಮ ಮೆಚ್ಚುವಂತಿರಬೇಕು ಎಂಬ ಶಾಸಕ ರಮೇಶ ಬಂಡಿಸಿದ್ದೇಗೌಡರ ಮಾತಿನಂತೆ ಕ್ಷೇತ್ರದಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಸದಾ ಒಂದಿಲ್ಲೊಂದು ಪ್ರಗತಿದಾಯಕ ಕೆಲಸಕ್ಕೆ ಮುಂದಾಗಿದ್ದೇವೆ. ಕ್ಷೇತ್ರದ ಜನರ ಕೆಲಸ ಕಾರ್ಯಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ನೆರವಾಗುತ್ತಿದ್ದು, ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಯುವ ಕಾಂಗ್ರೆಸ್‌ನ ಜಿಲ್ಲಾ ಕಾರ್ಯದರ್ಶಿ ಕಾಳೇನಹಳ್ಳಿ ರವಿ, ತಾಲೂಕು ಉಪಾಧ್ಯಕ್ಷ ರವಿ, ಯುವ ಮುಖಂಡರಾದ ಅಭಿಲಾಷ್, ಸತೀಶ್ ಹಳೆ ಸೇತುವೆ, ನಿರಂಜನ್, ಚೇತನ್ ಕ್ಯಾಂಟೀನ್ ಕಿರಣ್, ಧನುಷ್, ಅಭಿಷೇಕ್, ನಯನ್, ಜ್ಞಾನೇಶ್, ವಿ.ಸತೀಶ್, ನವೀನ್, ಸಾಗರ್ ಉಪಸ್ಥಿತರಿದ್ದರು.
ಅರಕೆರೆ ವೃದ್ಧಾಶ್ರಮದಲ್ಲಿ ಫಲಾಹಾರ ವಿತರಣೆ
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಜನ್ಮದಿನದ ದಿನದ ಪ್ರಯುಕ್ತ ಅವರ ಸ್ವಗ್ರಾಮ ತಾಲೂಕಿನ ಅರಕೆರೆ ಗ್ರಾಮದ ಪೂರ್ಣಿಮಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಕಸ್ತೂರ ಬಾ ಗಾಂಧಿ ವೃದ್ಧಾಶ್ರಮದ ಹಿರಿಯ ಸದಸ್ಯರಿಗೆ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಮಂಜುನಾಥ್, ಸದಸ್ಯ ತಮ್ಮಯ್ಯ, ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡ ಬೋರೇಗೌಡ, ಯುವ ಮುಖಂಡ ಶಶಾಂಕ್ ನೇತೃತ್ವದಲ್ಲಿ ಹಣ್ಣು, ಬ್ರೆಡ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಮಂಡ್ಯದಲ್ಲೂ ಆಚರಣೆ
ಮಂಡ್ಯದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಜನ್ಮ ದಿನದ ಪ್ರಯುಕ್ತ ಬೆಂಬಲಿಗರು ಮಮತೆಯ ಮಡಿಲು ಸಹಯೋಗದೋಂದಿಗೆ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೊತ್ತತ್ತಿ ಹೋಬಳಿಯ ಕಾಂಗ್ರೆಸ್ ಮುಖಂಡರಿಂದ ಅನ್ನದಾಸೋಹ ಮಾಡಲಾಯಿತು. ಗ್ರಾಮೀಣ ವೃತ್ತದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್, ಕಾಂಗ್ರೆಸ್ ಮುಖಂಡರಾದ ಚೀರನಹಳ್ಳಿ ಮಂಜುನಾಥ್, ಸೂನಗಹಳ್ಳಿ ಸುರೇಶ್, ಬೂತನಹೊಸೂರು ರಾಜಣ್ಣ, ಮಂಗಲ ಮಧು, ಯಶೋದಮ್ಮ ಉಪಸ್ಥಿತರಿದ್ದರು.