ತಿ.ನರಸೀಪುರ: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ. ಸೇವಾ ಕಾರ್ಯಗಳು ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯ್ ಕುಮಾರ್ ಹೇಳಿದರು.
ತಾಲೂಕಿನ ತುಂಬಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಬೈರಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶಿಸ್ತು ರೂಢಿಸಿಕೊಳ್ಳಬಹುದು. ಜೀವನದ ಗುರಿಯನ್ನು ಸರಿಯಾದ ಸಮಯದಲ್ಲಿ ಮುಟ್ಟಬಹುದು ಎಂದರು.
ಪ್ರಾಂಶುಪಾಲೆ ಡಾ.ಬಿ.ಪಿ.ಇಂದಿರಾ ಮಾತನಾಡಿ, ತುಂಬಲ ಗ್ರಾಮದಲ್ಲಿ ಏ.23 ರಿಂದ 29 ರವರೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ, ನಿಂಗೇಗೌಡನಹುಂಡಿ ಹಾಗೂ ತುಂಬಲ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ಯುವಜನತೆ ಘೋಷಣೆಯೊಂದಿಗೆ ವಾರ್ಷಿಕ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ. ಪುರುಷೋತ್ತಮ, ಸಹಪ್ರಾಧ್ಯಪಕ ಡಾ.ವಿ.ಸಂಪತ್ ಕುಮಾರ್, ಸಮಾಜ ಸೇವಕ ಡಾ.ಬಿ.ಪ್ರದೀಪ್, ಗ್ರಂಥಪಾಲಕ ಕುಮಾರ್ ಪಾಟೀಲ್, ಶಿಬಿರಾಧಿಕಾರಿ ಪಿ.ಕೆ.ಶಶಿರೇಖಾ, ಸಹ ಶಿಬಿರಾಧಿಕಾರಿಗಳಾದ ಬಿ.ಎಸ್.ರಾಧಿಕಾ, ಎನ್.ಪ್ರಶಾಂತ್, ಮಧುರಾ, ಅಂಬಿಕಾ ಇದ್ದರು.