ಮೈಸೂರು: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ಜಿ ವತಿಯಿಂದ ‘ಸಾರ್ಥ’ ದ್ವಿತೀಯ ಜಿಲ್ಲಾ ಸಮಾವೇಶ ಭಾನುವಾರ ನಗರದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿತ್ತು.
ಕಿದ್ವಾಯಿ ಆಸ್ಪತ್ರೆ ನಿವೃತ್ತ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ, ನಟ ಅನಿರುದ್ಧ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ನಟ ಅನಿರುದ್ಧ್ ಮಾತನಾಡಿ, ಸಾಮಾಜಿಕ, ಸೇವಾ ಕಾರ್ಯಕ್ರಮಗಳಿಗೆ ಲಯನ್ಸ್ ಸಂಸ್ಥೆ ಹೆಸರುವಾಸಿಯಾಗಿದೆ.
ನನ್ನ ತಂದೆ ತಾಯಿ ಇಬ್ಬರೂ ಸಹ ರೋಟರಿ, ಲಯನ್ಸ್ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಅಂತೆಯೇ ನಾನು ಸಹ ರೋಟರಿ, ಲಯನ್ಸ್ ಸಂಸ್ಥೆಯ ಸದಸ್ಯನಾಗಿ ಸಮಾಜ ಕಾರ್ಯದಲ್ಲಿ ಸಕ್ರಿಯವಾಗಿರುವೆ ಎಂದರು.
ಮೈಸೂರು ನಗರದೊಂದಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ, ಮೈಸೂರಿಗೆ ಏನಾದರೂ ಮಾಡಬೇಕು ಎಂಬ ಆಸೆ ಬಹುದಿನಗಳಿಂದ ಇದೆ. ಅದರಂತೆ ಜೆಎಲ್‌ಬಿ ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್ ಹೋಟೆಲ್ ಮುಂಭಾಗದಲ್ಲಿರುವ ಡಿವೈಡರ್ ಮಧ್ಯೆ ಸಸಿ ನೆಡುವ ಉದ್ದೇಶ ಇದೆ. ಪಾಲಿಕೆಯಿಂದ ಅನುಮತಿ ಸಿಕ್ಕಿದೆ. ಮಳೆಗಾಲಕ್ಕೂ ಮುನ್ನ ಲಯನ್ಸ್ ಕ್ಲಬ್‌ಯೊಂದಿಗೆ ಕೈ ಜೋಡಿಸಿ ಈ ಕೆಲಸ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಎನ್.ಸುಬ್ರಹ್ಮಣ್ಯ ಮಾತನಾಡಿ, ಮಧುಮೇಹ ಸಮಸ್ಯೆ ಈಗಿನ ಸಮುದಾಯವನ್ನು ತೀವ್ರವಾಗಿ ಕಾಡುತ್ತಿದೆ. ಪ್ರತಿ ನೂರು ಜನರಲ್ಲಿ ಒಬ್ಬರಿಗೆ ಹರಡುತ್ತದೆ. ನಾವು ಮಧುಮೇಹಕ್ಕೂ ಅಷ್ಟೇ ಪ್ರಾಮುಖ್ಯ ಕೊಡುತ್ತಿದ್ದೇವೆ. ದೂರದೃಷ್ಟಿ, ಪರಿಸರ ಸಂರಕ್ಷಣೆ, ಯುವ ಜನತೆಯಲ್ಲಿ ಜಾಗೃತಿ, ಕ್ಯಾನ್ಸರ್ ನಿಯಂತ್ರಣ, ಮಧುಮೇಹ ನಿವಾರಣೆ ಹಾಗೂ ಹಸಿವುಮುಕ್ತ ಸಮಾಜ ನಿರ್ಮಾಣದ ಕುರಿತು ಕೆಲಸ ಮಾಡಬೇಕಿದೆ ಎಂದರು.
ಸಂಸ್ಥೆಯ ಮುಖಂಡರಾದ ಡಾ.ಎನ್.ಕೃಷ್ಣೇಗೌಡ, ಕೆ.ದೇವೆಗೌಡ, ಕೆ.ಎಲ್.ರಾಜಶೇಖರ್, ಎಸ್.ಮತಿದೇವ್ ಕುಮಾರ್, ಸಿ.ಡಿ.ಕೃಷ್ಣ, ಪುನೀತ್ ಕುಮಾರ್, ವಿ.ವರ್ಷ, ಎಸ್.ನವೀನ್, ಎಂ.ಸಿದ್ದೇಗೌಡ, ಭರತೇಶ್, ರಮೇಶ್ ಇರರಿದ್ದರು.