ಜಿಲ್ಲೆ

ಸೇತುವೆ ನಿರ್ಮಿಸಲು ವಾಲೆತೋಪು ಗ್ರಾಮಸ್ಥರ ಪಟ್ಟು

ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ

ಕಣ್ವ ಜಲಾಶಯ ತುಂಬಿರುವುದರಿಂದ ವಾಲೆತೋಪು ಗ್ರಾಮಸ್ಥರು ಸೇತುವೆ ಇಲ್ಲದೆ ನದಿ ದಾಟಬೇಕಾಗಿದೆ. ಮಕ್ಕಳು ಶಾಲೆಗೆ ಹೋಗಲು, ದನಗಳಿಗೆ ಮೇವು ತರಲು, ಮತ್ತಿತರ ದೈನಂದಿನ ಕಾರ್ಯಗಳಿಗಾಗಿ ನದಿ ನೀರಿನಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಗ್ರಾಮದ ಮಧ್ಯಭಾಗದಲ್ಲಿ ಹರಿಯುವ ಕಣ್ವ ನದಿ ಗ್ರಾಮವನ್ನು ಹಳೇ ವಾಲೆತೋಪು ಹಾಗೂ ಹೊಸ ವಾಲೆತೋಪು ಎಂದು ಭಾಗವಾಗಿಸಿದೆ. ಶಾಲೆ, ಅಂಗನವಾಡಿ ಕೇಂದ್ರ ಹಳೇ ವಾಲೆತೋಪಿನಲ್ಲಿದ್ದರೆ, ಹಾಲಿನ ಡೇರಿ ಹಾಗೂ ಬಸ್ ನಿಲ್ದಾಣ ಹೊಸ ವಾಲೆ ತೋಪಿನಲ್ಲಿದೆ.

ದಶಕಗಳಿಂದ ಈ ಸಮಸ್ಯೆ ಇದೆ. ಆದರೆ, ಹಲವು ವರ್ಷಗಳಿಂದ ಜಲಾಶಯ ತುಂಬಿಲ್ಲದ ಕಾರಣ ಸಮಸ್ಯೆ ಎದುರಾಗಿರಲಿಲ್ಲ. ಇದೀಗ, ಜಲಾಶಯ ತುಂಬಿದ್ದು ನದಿಯಲ್ಲಿ ನೀರು ಹರಿಯುತ್ತಿದ್ದು ಸಮಸ್ಯೆ ಬಿಗಡಾಯಿಸಿದೆ. ಜತೆಗೆ ಸೇತುವೆ ಇಲ್ಲದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.

ಗ್ರಾಮ ಒಂದು, ಗ್ರಾಪಂ ಎರಡು!: ವಾಲೆತೋಪು ಗ್ರಾಮ ಒಂದೇ ಆಗಿದ್ದರೂ, ಕಣ್ವ ನದಿಯ ಒಂದು ಭಾಗದಲ್ಲಿರುವ ಹೊಸ ವಾಲೆತೋಪು ಕೂಡ್ಲೂರು ಪಂಚಾಯಿತಿಗೆ ಹಾಗೂ ಹಳೇ ವಾಲೆತೋಪು ಮಳೂರು ಪಂಚಾಯಿತಿಗೆ ಸೇರಿವೆ. ಈ ಎರಡೂ ಗ್ರಾಮಗಳಿಗೆ ಸೇತುವೆ ಸಂಪರ್ಕ ಕಲ್ಪಿಸಬೇಕು ಎನ್ನುವುದು ಹಲವು ದಶಕಗಳ ಬೇಡಿಕೆಯಾಗಿದೆ. ಸೇತುವೆಯಿರಲಿ, ಕನಿಷ್ಠ ತಾತ್ಕಾಲಿಕ ವ್ಯವಸ್ಥೆ ವಾಡಲೂ ಗ್ರಾಪಂಗಳು ಮುಂದಾಗುತ್ತಿಲ್ಲ. ಇದು ಜನರ ಅಸವಾಧಾನಕ್ಕೆ ಕಾರಣವಾಗಿದೆ. ಎರಡೂ ಗ್ರಾಮಗಳ ಜನತೆ ವಿಶೇಷವಾಗಿ ಮಕ್ಕಳಿಗೆ ಎದುರಾಗಿರುವ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಇದೊಂದೇ ಅಲ್ಲ:  ಕಣ್ವ ನದಿಯಲ್ಲಿ ಈ ಹಿಂದೆ ಅಕ್ರಮ ಮರಳು ಗಣಿಗಾರಿಕೆ ನಡೆಸಿರುವ ಕಾರಣ ನದಿಯಲ್ಲಿ ಸಾಕಷ್ಟು ಕಂದಕಗಳು ನಿರ್ಮಾಣವಾಗಿವೆ. ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೂಡ್ಲೂರು ಗ್ರಾಪಂ ವ್ಯಾಪ್ತಿಗೆ ಸೇರುವ ಮೂರು ಕಡೆ ಸಂಪರ್ಕ ಕಡಿತವಾಗಿದೆ. ಇದರೊಂದಿಗೆ ಕಣ್ವ ನದಿ ಪಾತ್ರದಲ್ಲಿರುವ ಹಲವು ಗ್ರಾಮಗಳಲ್ಲೂ ಇದೇ ಸಮಸ್ಯೆ ತಲೆದೋರಿದೆ.

ಆಗಬೇಕಿರುವುದೇನು? : ವಾಲೆತೋಪು ಗ್ರಾಮದಲ್ಲಿ ತಲೆದೋರಿರುವ ಸಮಸ್ಯೆಗೆ ತಕ್ಷಣ ಸ್ಥಳೀಯ ಗ್ರಾಪಂ ವತಿಯಿಂದ ಕಿರುಸೇತುವೆ ನಿರ್ಮಾಣವಾಗಬೇಕಿದೆ. ಪ್ರಸ್ತುತ ಅಧಿಕ ನೀರು ಹರಿಯದಿರುವ ಕಾರಣ ತಾತ್ಕಾಲಿಕವಾಗಿ ಕಿರುಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುವು ವಾಡಿಕೊಡಬೇಕಾಗಿದೆ. ಇನ್ನು ಈ ಗ್ರಾಮದ ಸಮೀಪದಲ್ಲೇ ಇರುವ ಹೊಟ್ಟಿಗಾನ ಹೊಸಹಳ್ಳಿ ಹಾಗೂ ಮಿಣಿಕೆರೆದೊಡ್ಡಿ ಗ್ರಾಮಗಳಿಗೂ ಕೂಡ್ಲೂರು ರಸ್ತೆಯಿಂದ ಸಂಪರ್ಕ ಕಟ್ ಆಗಿದೆ. ಈ ಹಿನ್ನೆಲೆಯಲ್ಲಿ ವಾಲೇತೋಪು ಗ್ರಾಮದ ಬಳಿ ಸೇತುವೆ ನಿರ್ಮಿಸಿದರೆ, ನದಿ ಪಕ್ಕದಲ್ಲಿ ನೂತನ ರಸ್ತೆ ನಿರ್ವಾಣ ವಾಡಿ ಮೂರೂ ಗ್ರಾಮಗಳ ಸಂಪರ್ಕಕ್ಕೆ ಶಾಶ್ವತ ಪರಿಹಾರ ಕಲ್ಪಿಸಬಹುದಾಗಿದೆ.

ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲು ಗ್ರಾಪಂ ಸಿದ್ಧವಾಗಿದೆ. ಇಲ್ಲಿ ಸೇತುವೆ ನಿರ್ವಾಣವಾದರೆ, ಐದಾರು ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದಕ್ಕೆ ಬೇಕಾದ ಅನುದಾನ ಬಿಡುಗಡೆಗೊಳಿಸುವಂತೆ ಕ್ಷೇತ್ರದ ಶಾಸಕರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅಧಿಕಾರಿಗಳ ಸಲಹೆ ಮೇರೆಗೆ ಕಿರುಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗೋವಿಂದೇಗೌಡ, ಕೂಡ್ಲೂರು ಗ್ರಾಪಂ ಅಧ್ಯಕ್ಷ ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ದೊಡ್ಡವರೇ ಪ್ರಯಾಸಪಟ್ಟು ದಾಟುವ ಪರಿಸ್ಥಿತಿ ಇದೆ. ಇನ್ನು ಚಿಕ್ಕಮಕ್ಕಳು ಪ್ರತಿನಿತ್ಯ ನೀರಿನಲ್ಲಿ ಹೊಳೆದಾಟಿ ಬರುತ್ತಿರುವುದು ಭಯ ಸೃಷ್ಟಿಸಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ವಿಜಿಯಮ್ಮ, ವಾಲೇತೋಪು, ಶಾಲೆ ಮುಖ್ಯಶಿಕ್ಷಕಿ