ಚಾಮರಾಜನಗರ: ಮಳೆ ಬಂದರೆ ಈ ಕಿರು ಸೇತುವೆ ಮೇಲೆ ನೀರು ತುಂಬಿ ಹರಿಯುತ್ತದೆ. ಅಕ್ಕ-ಪಕ್ಕದ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗುತ್ತದೆ. ರೊಚ್ಚಿಗೇಳುವ ಜನರಿಂದ ಪ್ರತಿಭಟನೆಗಳು ನಡೆಯುತ್ತವೆ. ಹಲವು ವರ್ಷಗಳಿಂದ ಬಗೆಹರಿಯದ ಈ ಸಮಸ್ಯೆಗೆ ಇದೀಗ ಪರಿಹಾರ ದೊರೆಯುತ್ತಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲು ಅನುಮತಿ ಸಿಕ್ಕಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಳಜಿಯ ಲವಾಗಿ ಹನೂರು ತಾಲೂಕಿನ ಭೈರನತ್ತ-ಬಿ.ಎಂ.ಹಳ್ಳಿ(ಗುಳ್ಯ) ಗ್ರಾಮದ ನಡುವೆ ಇರುವ ತಟ್ಟೆಹಳ್ಳದಲ್ಲಿ ಕಿರುಸೇತುವೆ ಇರುವ ಜಾಗದಲ್ಲಿ ದೊಡ್ಡ ಸೇತುವೆ ನಿರ್ಮಾಣ ಮಾಡಲು ಅನುದಾನದ ಅನುಮತಿ ಲಭಿಸಿದೆ. ಜಿಲ್ಲಾ ವಿಪತ್ತು ನಿರ್ವಹರ್ಣಾ ಪ್ರಾಧಿಕಾರವು ತಟ್ಟೆಹಳ್ಳದ ಕಿರು ಸೇತುವೆ ಇರುವ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣದ ಅಗತ್ಯತೆಯನ್ನು ಮನಗಂಡು ಕೇಂದ್ರ ಕಚೇರಿಗೆ ಮನವಿ ಮಾಡಿತ್ತು. ಅಂದಾಜು 2.94 ಕೋಟಿ ರೂ. ಅನುದಾನ ಕೋರಿತ್ತು. ಪ್ರಾಧಿಕಾರದ ವಿಪತ್ತು ಉಪಶಮನ ನಿಧಿಯಿಂದ ಅನುದಾನ ನೀಡಲು ಅನುಮತಿ ಸಿಕ್ಕಿದೆ.
ಗ್ರಾಮಸ್ಥರ ಬಹುವರ್ಷಗಳ ಬೇಡಿಕೆ:
ಭೈರನತ್ತ-ಬಿ.ಎಂ ಹಳ್ಳಿ(ಗುಳ್ಯ) ಮಾರ್ಗ ಮಧ್ಯೆ ಸಿಗುವ ತಟ್ಟೆಹಳ್ಳದ ಕಿರುಸೇತುವೆಯನ್ನು ಮೇಲ್ದರ್ಜೆಗೇರಿಸಬೇಕೆಂಬುದು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾಗಿದೆ. ಮಳೆಗಾಲದಲ್ಲಿ ತುಂಬಿಕೊಳ್ಳುವ ತಟ್ಟೆಹಳ್ಳದಿಂದ ಕಿರು ಸೇತುವೆ ಮೇಲೆ ನೀರು ಹರಿಯುತ್ತದೆ. ಮಳೆ ನಿಂತ ಬಳಿಕವೂ ಎರಡ್ಮೂರು ತಿಂಗಳ ಕಾಲ ಸೇತುವೆ ಮೇಲೆ ನೀರು ಹರಿಯುವುದು ನಿಲ್ಲುವುದಿಲ್ಲ.ಅಕ್ಕ-ಪಕ್ಕದ ಗ್ರಾಮಗಳ ಜನರು ಸಂಚರಿಸಲು ಸಮಸ್ಯೆಯುಂಟು ಮಾಡುತ್ತದೆ. ಡೇರಿಗೆ ಹಾಲು ಹಾಕಲು ಹೋಗುವ ಹೈನುಗಾರರು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನೀರು ತುಂಬಿದ ಸೇತುವೆ ಎದುರಾಗಿ ಪ್ರಾಣಾಪಾಯವನ್ನೇ ತಂದೊಡ್ಡುತ್ತಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನೀರಿಗಿಳಿದು ಪ್ರತಿಭಟನೆ ಮಾಡಿದ್ದರು. ಹನೂರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಕಾದು ಬಸವಳಿದ್ದಾರೆ. ತಹಸೀಲ್ದಾರ್ ಗ್ರಾಮ ವಾಸ್ತವ್ಯ ನಡೆಸಿದ್ದ ಸಂದರ್ಭದಲ್ಲೂ ಕಿರು ಸೇತುವೆ ಮೇಲ್ದರ್ಜೆಗೇರಿಸಬೇಕೆಂದು ಕೋರಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜವಾಗಿಲ್ಲ. ಈ ನಡುವೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುತುವರ್ಜಿ ವಹಿಸಿದ ಕಾರಣದಿಂದ ವಿಪತ್ತು ಉಪಶಮನ ನಿಧಿಯಿಂದ 2.94 ಕೋಟಿ ರೂ. ಅನುದಾನದ ಅನುಮತಿ ಸಿಕ್ಕಿದೆ.
ಜಾರಿ ಬೀಳುವ ಗ್ರಾಮಸ್ಥರು:
ತಟ್ಟೆಹಳ್ಳದ ಕಿರು ಸೇತುವೆ ಮೇಲೆ ನಿರಂತರವಾಗಿ ನೀರು ಹರಿಯುವುದರಿಂದ ಪಾಚಿ ಕಟ್ಟಿಕೊಳ್ಳುತ್ತಿದೆ. ಇಲ್ಲಿ ಸಂಚಾರ ಮಾಡುವ ಜನರು ಜಾರಿ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ. ಗ್ರಾಮಸ್ಥರಾದ ಮಲ್ಲೇಶ್, ಗುರುಸ್ವಾಮಿ, ಚಿಕ್ಕಣ್ಣ, ನಟರಾಜು ಮತ್ತು ಇತರರು ಕಾಲು ಜಾರಿ ಬಿದ್ದು ಗಾಯಗೊಂಡಿ ಚಿಕಿತ್ಸೆಗಾಗಿ ಸಾವಿರಾರು ಖರ್ಚು ಮಾಡಿದ್ದರು.
ಕಳೆದ ಹಲವು ವರ್ಷಗಳಿಂದ ಇಲ್ಲಿ ಕಿರು ಸೇತುವೆ ಮೇಲೆ ನೀರು ತುಂಬಿಕೊಂಡು ತುಂಬಾ ಸಮಸ್ಯೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಜಮೀನುಗಳಿಗೆ ಹೋಗಲು ಸಾಧ್ಯವಾಗಲ್ಲ. ಮಕ್ಕಳು ಶಾಲೆಗೆ ಹೋಗಲು ಆಗುವುದಿಲ್ಲ. 5 ಕಿ.ಮೀ ದೂರದ ಎಲ್ಲೆ ಮಾಳದ ಕಡೆಯಿಂದ ಬಳಸಿಕೊಂಡು ಓಡಾಡಬೇಕಾಗುತ್ತದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನದ ಅನುಮತಿ ಸಿಕ್ಕಿರುವುದು ಸಂತೋಷದ ವಿಚಾರ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಿ ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆವಹಿಸಬೇಕೆಂದು ಒತ್ತಾಯ ಮಾಡುತ್ತೇನೆ.
ರಾಜು, ಭೈರನತ್ತ ಗ್ರಾಮಸ್ಥ, ಹನೂರು