ಜಿಲ್ಲೆ

ಸೆಸ್ಕ್ ವಿರುದ್ಧ ಕಾಫಿ ಬೆಳೆಗಾರರು, ರೈತಸಂಘ ಪ್ರತಿಭಟನೆ

ಮೈಸೂರು: ಕಾಫಿ ಬೆಳೆಗಾರರ ಬೋರ್‌ವೆಲ್‌ಗೆ ವಿದ್ಯುತ್ ಮೀಟರ್ ಅಳವಡಿಸದಂತೆ ಒತ್ತಾಯಿಸಿ ಹಿನಕಲ್‌ನಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕ್) ಕೇಂದ್ರ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಕೊಡಗಿನಲ್ಲಿ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಸರ್ವೇ ಕಾರ್ಯ ನಡೆಯುತ್ತಿದೆ. ಪ್ರತಿ ಮನೆಗೆ ತೆರಳಿ ಲೈನ್‌ಮನ್‌ಗಳು ಆಧಾರ್ ಕಾರ್ಡ್, ವಿಳಾಸ ಸಂಗ್ರಹಿಸುವುದರಲ್ಲಿ ತೊಡಗಿದ್ದಾರೆ. ಇದಕ್ಕೆ ರೈತರ ತೀವ್ರ ವಿರೋಧವಿದೆ. ಮಳೆಗಾಲದಲ್ಲಿ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದರೂ ಸೆಸ್ಕ್ ಹಿರಿಯ ಅಧಿಕಾರಿಗಳು ಲೈನ್‌ಮನ್‌ಗಳನ್ನು ಗ್ರಾಹಕರಿಂದ ದಾಖಲೆ ಸಂಗ್ರಹಿಸುವ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಇದರಿಂದ ವಿದ್ಯುತ್ ದುರಸ್ತಿಗೆ ಸಿಬ್ಬಂದಿಯೇ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಆದೇಶ ಬಂದಿದೆ ಎಂಬ ಉತ್ತರ ನೀಡುತ್ತಾರೆ ಎಂದು ದೂರಿದರು.
ರಾಜ್ಯದ ಎಲ್ಲ ಗ್ರಾಮಗಳ ಕರ ನಿರಾಕರಣೆ, ವಿದ್ಯುತ್ ಬಾಕಿ ಮನ್ನಾ ಆಗಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು, ಕಾಫಿ ಬೆಳೆಗಾರರಿಗೆ ರೈತ ಹೋರಾಟದ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್ ಕೊಡಲು ಒಪ್ಪಿದ ಸರ್ಕಾರ ಈಗ ಮೀಟರ್ ಹಾಕುತ್ತಿರುವುದನ್ನು ಕೈಬಿಡಬೇಕು. ರೈತರ ಮತ್ತು ಕಾಫಿ ಬೆಳೆಗಾರರ ಕುಟುಂಬದ ಎಲ್ಲ ಸದಸ್ಯರಿಗೆ ಉಚಿತ ವಿದ್ಯುತ್ ನೀಡಬೇಕು, ಕನಿಷ್ಠ 12 ಗಂಟೆ ಹಗಲು ತ್ರೀ ಫೇಸ್ ವಿದ್ಯುತ್ ನೀಡಬೇಕು. ಕೃಷಿ ಲಾಭದಾಯಕವಾಗುವವರೆಗೂ ರೈತರಿಗೆ ಮತ್ತು ಕಾರ್ಮಿಕರಿಗೆ ಶುಲ್ಕ ರಹಿತ ವಿದ್ಯುತ್ ಸರಬರಾಜು ಇರಬೇಕು ಎನ್ನುವ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಸ್ಕ್ ವ್ಯವಸ್ಥಾಪಕ ಜಯವಿಭವಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರಿಗೆ ಉಚಿತ ವಿದ್ಯುತ್ ನೀಡಲು ಮೀನಮೇಷ ಎಣಿಸುವ ಸರ್ಕಾರ, ಕಾರ್ಪೊರೇಟ್ ಕಂಪನಿಗಳಿಗೆ ಕೋಟ್ಯಂತರ ರೂ. ಸಾಲ ಮನ್ನಾ ಮಾಡುತ್ತದೆ. ವಿದೇಶಿ ವಿನಿಮಯಕ್ಕೆ ಪೂರಕವಾಗಿರುವ ಕಾಫಿ ಬೆಳೆಯುವ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾದರೆ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಮೀಟರ್ ಅಳವಡಿಸಲು ಮುಂದಾದ ಗುಂಡೂರಾವ್, ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನೇ ಕಿತ್ತೊಗೆಯಲಾಗಿತ್ತು. ಈಗಲೂ ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ ದಸರಾಕ್ಕೆ ಬರುವ ಮುಖ್ಯಮಂತ್ರಿ, ಸಚಿವರನ್ನು ೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಸಂಘದ ವಿಭಾಗೀಯ ಉಪಾಧ್ಯಕ್ಷ ಮನು ಸೋಮಯ್ಯ, ಹೊಸಕೋಟೆ ಬಸವರಾಜು, ಪದಾಧಿಕಾರಿಗಳಾದ ಶ್ರೀಕಾಂತರಾಜೇ ಅರಸ್, ಶಿರಮಳ್ಳಿ ಸಿದ್ದಯ್ಯ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ, ಬೊಕ್ಕಳಿ ನಂಜುಂಡಸ್ವಾಮಿ ಇತರರು ಇದ್ದರು.