ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಕೆ.ಎಂ.ಮುನಿಗೋಪಾಲ್ ರಾಜು ಶನಿವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತಿ ಎಂಡಿ ಜಿ.ಶೀಲಾ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನಿಗಮದ ತಾಂತ್ರಿಕ ನಿರ್ದೇಶಕರಾಗಿರುವ ಕೆ.ಎಂ.ಮುನಿಗೋಪಾಲರಾಜು ಅವರು ಈ ಸ್ಥಾನಕ್ಕೆ ನಿಯೋಜನೆಗೊಂಡಿದ್ದಾರೆ.
ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು, ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ಸೆಸ್ಕ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸೋಣ ಎಂದರು.
ನಿಗಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದ್ದು, ಆ ಮೂಲಕ ನಿಗಮದ ಎಲ್ಲ ಕೆಲಸಗಳು ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ಮೇರೆಗೆ ಕೆಲಸ ಮಾಡಬೇಕಿದೆ. ನಿಗಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸಗಳು ಹಾಗೂ ಜವಾಬ್ದಾರಿಯನ್ನು ಅರಿತು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಸೂಚನೆ ನೀಡಿದರು.
ನಿಗಮದ ಏಳಿಗೆಯ ಜತೆಗೆ, ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ಸಾಕಷ್ಟು ಯೋಜನೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಯಾವುದೇ ಸಮಸ್ಯೆ ಅಥವಾ ತೊಂದರೆಗಳಿದ್ದಲ್ಲಿ ಅದನ್ನು ನೇರವಾಗಿ ನನ್ನ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕಿದೆ. ನಿಗಮವೂ ಈಗಾಗಲೇ ತಾಂತ್ರಿಕ ನಿರ್ವಹಣೆಯಲ್ಲಿ ಸುಧಾರಣೆ ಕಂಡಿದ್ದು, ಆರ್ಥಿಕ ಮತ್ತು ಆಡಳಿತ ವಿಭಾಗದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕಿದೆ. ಹೊಸ ಕೆಲಸಗಳೊಂದಿಗೆ ಈಗಾಗಲೇ ಚಾಲ್ತಿಯಲ್ಲಿರುವ ಕೆಲಸಗಳು ಸಹ ನಿಗದಿತ ಸಮಯದಲ್ಲಿ ಪೂರ್ಣವಾಗುವಂತೆ ಗಮನವಹಿಸಬೇಕು ಎಂದು ತಿಳಿಸಿದರು.