ಜಿಲ್ಲೆ

ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಶ್ರೀರಂಗಪಟ್ಟಣ: ಸರ್ಕಾರ ರೈತರ ಕೃಷಿಗೆ ಅನೂಕೂಲವಾಗುವಂತೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಸೆಸ್ಕ್ ಕಚೇರಿಗೆ ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳ ರೈತರು ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿ ನಡೆಸಿ ಸೆಸ್ಕ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಸಂಘದ ತಾಲೂಕು ಅಧ್ಯಕ್ಷ ನೆಲಮನೆ ಶಂಭುಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ರೈತರ ಪಂಪ್‌ಸೆಟ್‌ಗಳಿಗೆ 3 ಫೇಸ್ ವಿದ್ಯುತ್ ಪೂರೈಸಿ ಬೇಸಿಗೆಯಲ್ಲೂ ವ್ಯವಸಾಯ ಮಾಡಲು ನೆರವಾಗುತ್ತೇವೆ ಎಂಬ ಆಶ್ವಾಸನೆ ನೀಡಿದ್ದು, ಆದರೆ ವಾಸ್ತವದಲ್ಲಿ ಹಗಲು 4 ರಾತ್ರಿ 3 ಗಂಟೆ ಸೇರಿ ಒಟ್ಟು 7 ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ತಾಲೂಕಿನ ರೈತರು ರಾತ್ರಿ ವೇಳೆ ಕೃಷಿ ಜಮೀನುಗಳಲ್ಲಿ ಒಬ್ಬಂಟಿಯಾಗಿ ನೀರು ಹಾಯಿಸಲು ಸಾಕಷ್ಟು ಸಮಸ್ಯೆಗಳ ಎದುರಿಸುವ ಜತೆಗೆ ಹಾವು ಅಥವಾ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ತಕ್ಷಣ ಸರ್ಕಾರ ಈ ಧೋರಣೆ ನೀತಿ ಕೈಬಿಟ್ಟು ಹಗಲಿನ ವೇಳೆಯೇ 10 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಪಾಂಡು ಮಾತನಾಡಿ, ರಾಜ್ಯ ಸರ್ಕಾರ ಕೆಲವೊಂದು ಹೊಸ ನೀತಿಗಳ ಮೂಲಕ ಬಡ ರೈತರನ್ನು ಶೋಷಣೆಗೆ ಒಳಪಡಿಸಿದ್ದು, ಹೊಸದಾಗಿ ಪಂಪ್‌ಸೆಟ್ ಅಳವಡಿಸುವವರಿಗೆ ಲಕ್ಷಾಂತರ ರೂ. ದರ ವಿಧಿಸಲಾಗುತ್ತಿದೆ. ಇನ್ನು ಇದಕ್ಕಾಗಿ ಹಿಂದೆ ಇದ್ದ ಅಕ್ರಮ-ಸಕ್ರಮ ನೀತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ಸ್ಥಳಕ್ಕೆ ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್ ಸಿಬ್ಬಂದಿಯೊಂದಿಗೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಸರ್ಕಾರಕ್ಕೆ ರೈತರ ಬೇಡಿಕೆಗಳ ಮನವಿಯನ್ನು ರವಾನಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಡಲು ಮುಂದಾಗುವುದಾಗಿ ಭರವಸೆ ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ, ಉಪಾಧ್ಯಕ್ಷರಾದ ಆಲೆಮನೆ ಸೋಮಣ್ಣ, ಲೋಕೇಶ್, ಜಯರಾಮೇಗೌಡ, ನಿಂಗೇಗೌಡ, ಖಜಾಂಚಿ ಡಿ.ಎಂ.ಕೃಷ್ಣೇಗೌಡ, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ, ಸಹ ಕಾರ್ಯದರ್ಶಿ ಶಶಿಧರ್, ಮುಖಂಡ ಮೇಳಾಪುರ ಸ್ವಾಮಿಗೌಡ, ಬಿಜೆಪಿ ಮುಖಂಡ ಮೇಳಾಪುರ ಪುಟ್ಟರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಬಿ.ಎಸ್.ರಮೇಶ್ ಮತ್ತಿತರರು ಹಾಜರಿದ್ದರು.