ಅರಕಲಗೂಡು: ಮನೆಯ ಮುಂಭಾಗ ವಿದ್ಯುತ್ ತಂತಿ ಜೋತು ಬಿದ್ದಿದ್ದು ತಿರುಗಾಡಲು ಭಯವಾಗುತ್ತಿದೆ. ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಾಳಿ ಮಳೆಗೆ ಲೈನ್‌ಗಳು ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಸೆಸ್ಕ್ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಗಳ ಸುರಿಮಳೆಗೈದರು.
ತಾಲೂಕಿನ ಯಲಗತವಳ್ಳಿ ಗ್ರಾಪಂ ವ್ಯಾಪ್ತಿಯ ಯಗಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ ಮಾತನಾಡಿದ ಜನರು, ಯಗಟಿಯಲ್ಲಿ ಮನೆಯ ಮುಂಭಾಗ ವಿದ್ಯುತ್ ತಂತಿ ಜೋತು ಬಿದ್ದಿದ್ದು ತಿರುಗಾಡಲು ಭಯವಾಗುತ್ತಿದೆ. ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಏನಾದರೂ ಅವಘಡ ಸಂಭವಿಸಿದರೆ ಸೆಸ್ಕ್ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ವಲಯ ಮುಖ್ಯ ಇಂಜಿನಿಯರ್ ಮಹದೇವಸ್ವಾಮಿ ಅವರು ಇದಕ್ಕೆ ಪ್ರತಿಕ್ರಿಯಿಸಿ, ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸರಿಪಡಿಸುವಂತೆ ಲೈನ್‌ಮನ್‌ಗಳಿಗೆ ಸೂಚಿಸಿದರು.
ಯಲಗತವಳ್ಳಿ ಗಿರೀಶ್ ಮಾತನಾಡಿ, ಮನೆಯ ಮುಂಭಾಗದಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ಕಂಬದ ಅಂತರ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಗಾಳಿಗೆ ಒಂದಕ್ಕೊಂದು ವೈರ್‌ಗಳು ತಾಗಿ ಬೆಂಕಿ ಹೊತ್ತಿ ಬರುತ್ತಿದ್ದು, ತುಂಡಾಗಿ ಬೀಳುವ ಸಂಭವ ಹೆಚ್ಚಿದೆ. ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಈ ಕುರಿತು ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಮತ್ತೊಂದು ಕಂಬವನ್ನು ಅಳವಡಿಸಬೇಕು ಎಂದಾಗ, ಮಹದೇವಸ್ವಾಮಿ ಪ್ರತಿಕ್ರಿಯಿಸಿ, ಕೂಡಲೇ ಕಂಬ ಅಳವಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲ ಗ್ರಾಮಸ್ಥರು ಕಂಬ ಮತ್ತು ವೈರುಗಳ ಬದಲಾವಣೆ ಮಾಡಿಸುವಂತೆ ದೂರು ನೀಡಿದರೆ ಮತ್ತೆ ಕೆಲವರು, ಟಿಸಿಗೆ ಅಳವಡಿಸಿರುವ ವಯರ್‌ಗಳು ತುಕ್ಕು ಹಿಡಿದಿದ್ದು ಬದಲಿಸುವಂತೆ ದೂರು ನೀಡಿದರು.
ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಅರಕಲಗೂಡು ಸಹಾಯಕ ಇಂಜಿನಿಯರ್ ಚಿದಂಬರ, ಟೆಕ್ನಿಶಿಯನ್ ನಾಗೇಶ್, ವಿಭಾಗಿಯ ಅಧಿಕಾರಿ ಸುಕುಮಾರ್ ಇತರರಿದ್ದರು.