ಜಿಲ್ಲೆ

ಸೆರೆ ಸಿಕ್ಕ ಚಿರತೆಗೆ ಮೃಗಾಲಯದಲ್ಲಿ ಚಿಕಿತ್ಸೆ

ಚಿತ್ರದುರ್ಗ: ಹಲವು ದಿನಗಳಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಏಳೆಂಟು ವರ್ಷದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ತಾಲೂಕು ಇಂಗಳದಾಳ್, ಕುಂಚಿಗನಾಳ್ ಗ್ರಾಮಗಳಲ್ಲಿ ಓಡಾಡುತ್ತಿದ್ದ ಗಂಡು ಚಿರತೆ, ಕುರಿ ಇತ್ಯಾದಿ ಜಾನುವಾರಗಳ ಜೀವಕ್ಕೆ ಕಂಟಕವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು.

ಶನಿವಾರ ಎಮ್ಮೆ ಕರುವೊಂದನ್ನು ಹಿಡಿದು ತಿನ್ನುವ ವೇಳೆ ಸುದ್ದಿ ತಿಳಿದು ಇಂಗಳದಾಳ್ ಗ್ರಾಮಕ್ಕೆ ಧಾವಿಸಿದ್ದ ಅರಣ್ಯಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನಿಟ್ಟಿದ್ದರು. ಭಾನುವಾರ ಸಿಕ್ಕಿಬಿದ್ದಿದೆ. ಚಿರತೆ ಬಲಗಣ್ಣಿಗೆ ಗಾಯವಾಗಿರುವುದು ಅದರ ಉಪಟಳ ಹೆಚ್ಚಾಗಲು ಕಾರಣವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿಕಿತ್ಸೆ: ಸಿಕ್ಕಿಬಿದ್ದಿರುವ ಚಿರತೆಗೆ ಚಿತ್ರದುರ್ಗ ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಶುವೈದ್ಯಾಧಿಕಾರಿ ಡಾ. ಹರೀಶ್ ಅವರ ತಂಡ ಚಿಕಿತ್ಸೆ ನೀಡುತ್ತಿದೆ.

ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಸಂತ್‌ಕುಮಾರ್, ಡಿಆರ್‌ಎಫ್‌ಒ ರಾಮದಾಸ್, ಅರಣ್ಯ ರಕ್ಷಕ ಪ್ರಭು ಮತ್ತಿತರರು ಇದ್ದರು.