ಜಿಲ್ಲೆ

ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ವಿಳಂಬಕ್ಕೆ ಕಿಡಿ

ಯಾದಗಿರಿ: ಗುಲಬರ್ಗಾ ವಿಶ್ವವಿದ್ಯಾಲಯದ ಐದು ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ವಿವಿಯ ವಿರುದ್ಧ ಕ್ರಮ ಜರುಗಿಸಿ ಜಿಡ್ಡುಗಟ್ಟಿದ ಆಡಳಿತ ಯಂತ್ರಾಂಗ ಆಮೂಲಾಗ್ರ ಸುಧಾರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಜಿಲ್ಲಾ ಘಟಕ ಒತ್ತಾಯಿಸಿದೆ.

ಶುಕ್ರವಾರ ಇಲ್ಲಿನ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಗುಲಬರ್ಗಾ ವಿವಿ ವಿಭಜನೆ ಹೊಂದಿ ರಾಯಚೂರು ಪ್ರತ್ಯೇಕವಾದ ವಿವಿಯಾಗಿದೆ. ಆದರೆ ಹಳೆ ವಿವಿಯಲ್ಲಿ ಉಳಿದಿರುವ ಕೊನೆ ಎರಡು ವರ್ಷಗಳ ವಿದ್ಯಾರ್ಥಿ ಗಳ ಫಲಿತಾಂಶ ಪ್ರಕಟಿಸಲು ಲಾಬಿ ಕಾರಣದಿಂದ ಅನಗತ್ಯ ವಿಳಂಬ ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಐದನೇ ಸೆಮ್ನ ಪರೀಕ್ಷೆಗಳು ಮುಗಿದು ಸರಿಸುಮಾರು 6 ತಿಂಗಳಾಗುತ್ತಾ ಬರುತ್ತಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.

ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣ ಪಡೆದುಕೊಳ್ಳಲು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಸಹ ಆಗುತ್ತಿಲ್ಲ. ಇದಲ್ಲದೇ ಅನ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಆದರೆ ಗುಲಬರ್ಗಾ ವಿವಿಯಲ್ಲಿ ಓದುತ್ತಿರುವ ಅಥವಾ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬೇರಡೆ ಹೋಗಲೂ ಆಗದೇ ಸೀಟು ಸಿಗದೇ ಒಂದು ವರ್ಷ ಮನೆಯಲ್ಲಿ ಕೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಫಲಿತಾಂಶ ಎಲ್ಲವನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ವಿವಿ ಆಡಳಿತ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾದ್ಯಕ್ಷ ವಿಶ್ವರಾಜ ಹೊನಗೇರಾ, ಪ್ರಧಾನ ಸಂಚಾಲಕ ರವಿಚಂದ್ರ ತೆಲಗುರ, ಚೆನ್ನು ಹೊನಿಗೇರಾ, ರಾಕೇಶ, ಮೌನೇಶ, ದೇವರಾಜ ಅರಸ, ಸುರೇಶ ಯಲ್ಹೇರಿ, ದೇವು ಹಿರೇತುಮಕೂರು, ಹರೀಶ, ಮಲ್ಲು ಹತ್ತಿಕುಣಿ ಇದ್ದರು.