ಮೈಸೂರು: ಸೆಮಿಕಂಡಕ್ಟರ್ ತಂತ್ರಜ್ಞಾನ ಅಭಿವೃದ್ಧಿಗೊಳಿಸಬೇಕಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥ ಪ್ರೊ.ನವಕಾಂತ ಭಟ್ ಹೇಳಿದರು.
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ‘ಸೆಮಿಕಂಡಕ್ಟರ್ ತಂತ್ರಜ್ಞಾನ: ಪ್ರವೃತ್ತಿಗಳು ಹಾಗೂ ಸವಾಲುಗಳು’ ಕುರಿತು ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಉನ್ನತೀಕರಿಸುವುದು ಇಂದಿನ ಅಗತ್ಯವಾಗಿದೆ. ಈಗಾಗಲೇ ಟ್ರೂ ನಾರ್ಥ್ ಅನ್ನು ಇಂಟೆಲ್, ಲೋಹ್ಹಿ ಅನ್ನು ಐಬಿಎಂ ಅನುಷ್ಠಾನಗೊಳಿಸಿವೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ಮಾಹಿತಿ ತಂತ್ರಜ್ಞಾನವೆಂದು ಮೇಲ್ನೋಟಕ್ಕೆ ಅಂದುಕೊಂಡಿದ್ದು, ಅದು ಹಾರ್ಡ್‌ವೇರ್ ತಂತ್ರಜ್ಞಾನವಾಗಿದೆ. ಜೆನೊಮಿಕ್ಸ್, ಸೈಬರ್ ಭದ್ರತೆ, ಸೇನೆ, ಹಣಕಾಸು, ವಿಜ್ಞಾನ, ಸರ್ಕಾರ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿದೆ.
ಎಐ ಶ್ರೇಷ್ಠವಾದದ್ದನ್ನು ಸೃಷ್ಟಿಸಬಹುದು. ಆದರೆ, ಭೂಮಿಯನ್ನು ಸುಡಲಾರದು ಎಂಬುದಕ್ಕೆ ಖಾತ್ರಿಯಿಲ್ಲ. ಪರಮಾಣು ಬಾಂಬ್ ಸ್ಫೋಟದಿಂದ ಆಗುವ ಪರಿಣಾಮದಷ್ಟೇ ಎಐನಿಂದ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿಪ್‌ಗಳ ಟ್ರಾನ್‌ಸಿಸ್ಟರ್‌ಗಳನ್ನು ಸುಧಾರಿಸಬೇಕಿದೆ. ಮಿದುಳು ಕೇವಲ 20 ವಾಟ್ ಶಕ್ತಿ ಬಳಕೆ ಮಾಡುತ್ತದೆ. ಸ್ವನಿರ್ಧಾರ ಹಾಗೂ ಮಿದುಳಿನ ಒಂದು ಭಾಗ ನಿಷ್ಕ್ರಿಯವಾದರೆ, ಮತ್ತೊಂದು ಭಾಗವು ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅದೇ ಮಾದರಿಯಲ್ಲಿ ಟ್ರಾನ್‌ಸಿಸ್ಟರ್‌ಗಳನ್ನು ತಯಾರಿಸಬೇಕಿದೆ ಎಂದು ಹೇಳಿದರು.
ಜಾಗತಿಕ ಶಕ್ತಿ ಉತ್ಪಾದನೆಯ ಶೇ.20ರಷ್ಟು ವಿದ್ಯುತ್ ದತ್ತಾಂಶ (ಡೇಟಾ) ರಕ್ಷಣೆಗಾಗಿ ಉಪಯೋಗವಾಗುತ್ತಿದೆ. ಇದು 2035ರಲ್ಲಿ ಶೇ.100ರಷ್ಟು ಮುಟ್ಟಲಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸುರೇಶ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರವು ತ್ವರಿತವಾಗಿ ಅಭಿವೃದ್ಧಿಯಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶ ಸೃಷ್ಟಿಯಾಗಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ತಂತ್ರಜ್ಞಾನದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎನ್.ಸಂತೋಷ್‌ಕುಮಾರ್, ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ನಟರಾಜು, ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಯು.ಬಿ. ಮಹದೇವಸ್ವಾಮಿ ಇದ್ದರು.