ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬುಧವಾರ ನೆಲಸಮ ಮಾಡಲಾಗಿದೆ. ಮಾರ್ಕೆಟ್ ಕಟ್ಟಡ ಶಿಥಿಲವಾಗಿದ್ದ ಕಾರಣ ಕಳೆದ ವರ್ಷ (2020) ಏಪ್ರಿಲ್‌ನಲ್ಲಿ ಮಾರ್ಕೆಟ್ ಮುಚ್ಚಲಾಗಿತ್ತು. ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಮಾರ್ಕೆಟ್ ಕಟ್ಟಡ ನಿರ್ಮಾಣವಾಗಲಿದೆ.
ಆರು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಸೆಂಟ್ರಲ್ ಮಾರ್ಕೆಟ್ ಕಟ್ಟಡ ತೆರವುಗೊಳಿಸಿ ಹೊಸ ಮಾರ್ಕೆಟ್ ಕಟ್ಟಡ ಕಟ್ಟಿಸುವ ಬಗ್ಗೆ 2016ರ ಮಹಾನಗರ ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಬಳಿಕ ವಿಸ್ತೃತ ಯೋಜನಾ ವರದಿ ತಯಾರಿಸಿ ಸ್ಮಾರ್ಟ್ ಸಿಟಿ ಮಂಡಳಿ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾರ್ಕೆಟ್ ಕಟ್ಟಡದ ತಪಾಸಣೆ ನಡೆಸಿ, ಅದು ವಾಸ ಯೋಗ್ಯವಲ್ಲ ಎಂದು ದೃಢೀಕರಿಸಿ ಕಟ್ಟಡ ಕೆಡವಲು ಶಿಫಾರಸು ಮಾಡಿದ್ದರು. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಮಾರ್ಕೆಟ್‌ನ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮುಚ್ಚಲು ಆದೇಶ ಹೊರಡಿಸಲಾಗಿತ್ತು. ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಮಾರ್ಕೆಟ್‌ಗೆ ಸ್ಥಳಾಂತರಿಸಲಾಗಿತ್ತು.
ಹೈಕೋರ್ಟ್ ತಡೆಯಾಜ್ಞೆ: ರಿಟೇಲ್ ವ್ಯಾಪಾರಿಗಳಿಗೆ ನೆಹರು ಮೈದಾನ ಬಳಿ ತಾತ್ಕಾಲಿಕ ಮಾರ್ಕೆಟ್ ಕಟ್ಟಡ ನಿರ್ಮಿಸುವ ಬಗ್ಗೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಫುಟ್‌ಬಾಲ್ ಮೈದಾನದಲ್ಲಿ ನಿರ್ಮಾಣ ಚಟುವಟಿಕೆ ನಡೆಸುವುದರ ವಿರುದ್ಧ ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರಿಂದ ಹೈಕೋರ್ಟ್ 2020 ಜೂನ್ 17ರಂದು ಕಟ್ಟಡ ನಿರ್ಮಾಣ ಮಾಡುವುದರ ವಿರುದ್ಧ ತಡೆಯಾಜ್ಞೆ ನೀಡಿತ್ತು.
ಬಳಿಕ ನಗರದ ಆಯ್ದ ಕೆಲವು ಕಡೆ ಬೀದಿಬದಿ ರಿಟೇಲ್ ವ್ಯಾಪಾರಿಗಳಿಗೆ ತಗಡು ಶೀಟಿನ ಶೆಡ್ ನಿರ್ಮಾಣ ಮಾಡಿಕೊಡಲಾಗಿತ್ತು. ಅಲ್ಲಿ ವ್ಯಾಪಾರಕ್ಕೆ ರೀಟೆಲ್ ವ್ಯಾಪಾರಿಗಳು ಮುಂದೆ ಬಂದಿರಲಿಲ್ಲ. ತಾತ್ಕಾಲಿಕ ಮಾರ್ಕೆಟ್ ಕಟ್ಟಡ ನಿರ್ಮಿಸುವ ಜಾಗದ ವಿಚಾರ ಈಗಲೂ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದಂತೆ 35 ಅಧಿಕೃತ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಪಾಲಿಕೆ ನೀಡಿರುವ ಅನುಮತಿ ಮಾ.31ರಂದು ಮುಕ್ತಾಯವಾಗಿದ್ದು, ಮಾರ್ಕೆಟ್ ಕಟ್ಟಡ ಕೆಡಹುವ ಬಗ್ಗೆ ಅನುಮತಿ ಕೋರಿ ಮನಪಾ ಏಪ್ರಿಲ್‌ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಈಗ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಕಟ್ಟಡ ಕೆಡವಲು ಪಾಲಿಕೆ ಕ್ರಮ ಕೈಗೊಂಡಿದೆ.
ಹೊಸತಕ್ಕೆ 114 ಕೋಟಿ ರೂ. ವೆಚ್ಚ: ಹೊಸ ಮಾರ್ಕೆಟ್‌ಗಾಗಿ 114 ಕೋಟಿ ರೂ. ವೆಚ್ಚದಲ್ಲಿ ನೆಲ ಅಂತಸ್ತು ಹಾಗೂ ಐದು ಮಹಡಿಯ ಹೊಸ ಸ್ಮಾರ್ಟ್ ಮಾರ್ಕೆಟ್ ಕಟ್ಟಡ ನಿರ್ಮಾಣವಾಗಲಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿ. ಸಂಸ್ಥೆಯು ಸೋಮಯಾಜಿ ಎಸ್ಟೇಟ್ಸ್, ಆರ್.ಕೆ.ಇನ್‌ಫ್ರಾ ಇಂಡಿಯಾ ಮತ್ತು ಆರ್ಯಾರಾಧಾ ಇನ್‌ಫ್ರಾ ಸಂಸ್ಥೆಗಳ ಜತೆ ಪಾಲುದಾರಿಕೆಯಲ್ಲಿ (ಪಿಪಿಸಿ) ಕಟ್ಟಡ ನಿರ್ಮಾಣ ಮಾಡಲಿದೆ.
ಮಾರ್ಕೆಟ್‌ನ ಎಲ್ಲ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಮಾರ್ಕೆಟ್ ಕಟ್ಟಡದ ಹೊರಭಾಗದಲ್ಲಿ ಕೆಲವು ಅಂಗಡಿಗಳಿದ್ದು, ಅಲ್ಲಿನ ವರ್ತಕರಿಗೆ ತೆರವು ಮಾಡುವಂತೆ ಸೂಚಿಸಲಾಗಿದೆ. ಮೇ 27ರಂದು ಬೆಳಗ್ಗೆ ಲಾಕ್‌ಡೌನ್ ಬಿಡುವಿನ ವೇಳೆ ಸರಕು ಸಾಗಿಸುವಂತೆ ತಿಳಿಸಲಾಗಿದೆ.
ಅಕ್ಷಿ ಶ್ರೀಧರ್ ಮಹಾನಗರ ಪಾಲಿಕೆ ಆಯುಕ್ತರು
ಸೆಂಟ್ರಲ್ ಮಾರ್ಕೆಟ್ ಕೆಡಹಿ ಹೊಸ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ 2020ರ ಡಿಸೆಂಬರ್‌ನಲ್ಲಿ ನಡೆದ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿತ್ತು. ಈಗ ಸರ್ಕಾರದ ಅನುಮತಿ ಪಡೆದು ಕಟ್ಟಡ ಕೆಡಹುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬುಧವಾರ ಸೆಂಟ್ರಲ್ ಮಾರ್ಕೆಟ್‌ನ ಮಧ್ಯಭಾಗದಲ್ಲಿರುವ ಅಂಗಡಿಗಳನ್ನು ಕೆಡವಲಾಗಿದೆ.
ಪ್ರೇಮಾನಂದ ಶೆಟ್ಟಿ ಮಂಗಳೂರು ಮೇಯರ್