ಜಿಲ್ಲೆ

ಸೆಂಟ್ರಲ್ ಜೈಲಿಗೆ ಕೈದಿ ಸ್ಥಳಾಂತರಕ್ಕೆ ಸಿದ್ಧತೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿ ಸಮ್ಮು ಅಲಿಯಾಸ್ ಬಷೀರ್‌ಸಾಬ್‌ನನ್ನು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಕಾರಾಗೃಹ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಮೂಲದ ಆರೋಪಿ ಸಮ್ಮು ವಿರುದ್ಧ ನಗರದ ಬಡಾವಣೆ ಸಹಿತ ರಾಜ್ಯದ ವಿವಿಧ ಠಾಣೆಗಳಲ್ಲಿ 16 ಪ್ರಕರಣಗಳು ದಾಖಲಾಗಿವೆ.
ವಿಚಾರಣೆಗೆಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಆ.23 ರಂದು ಹಾಜರುಪಡಿಸಿದ್ದ ವೇಳೆ ಸಮ್ಮು, ಕೋರ್ಟ್ ಕಿಟಕಿ ಗ್ಲಾಸ್ ಒಡೆದು ಕೂಗಾಟ ನಡೆಸಿದ್ದ. ಜಿಲ್ಲಾ ಕಾರಾಗೃಹದ ಅಧಿಕಾರಿ, ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದ.
ಚಿತ್ರದುರ್ಗ ಜಿಲ್ಲಾ ಕಾರಾಗೃಹ ಅಧೀಕ್ಷಕರಾಗಿ ಈಚೆಗೆ ಅಧಿಕಾರ ವಹಿಸಿಕೊಂಡಿದ್ದ ಸಿದ್ದರಾಮ ಬಿ.ಪಾಟೀಲ ಅವರ ನೇತೃತ್ವದಲ್ಲಿ ಆ.15 ರಂದು ಸಮ್ಮುವಿನ ಸೆಲ್‌ನಲ್ಲಿ ತಪಾಸಣೆ ಮಾಡಿದ್ದಾಗ, ಆತನ ಬಳಿ 2 ಮೊಬೈಲ್‌ಗಳು, ಚಾರ್ಜರ್ ಹಾಗೂ 25-30 ಗ್ರಾಂ ಗಾಂಜಾ ಹೋಲುವ ಸೊಪ್ಪು ದೊರಕಿತ್ತು. ಅವುಗಳನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಆರೋಪಿತನ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.
ತಪಾಸಣೆ ವೇಳೆ ಸಮ್ಮು ಅಸಹಕಾರ ತೋರಿದ್ದರಿಂದ ಹಾಗೂ ನಿಷೇಧಿತ ವಸ್ತುಗಳ ಪತ್ತೆ ಹಿನ್ನೆಲೆಯಲ್ಲಿ ಕಾರಾಗೃಹಗಳ ನಿಯಮಗಳಾನುಸಾರ ಒಂದು ತಿಂಗಳು ಏಕಾಂತವಾಸದೊಂದಿಗೆ ಫೋನ್‌ಕಾಲ್ ಸೌಲಭ್ಯ ಕಡಿತ ಮಾಡಲಾಗಿತ್ತು. ಸಮ್ಮುವನ್ನು ವಿಜಯಪುರಕ್ಕೆ ವರ್ಗಾಯಿಸಲು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ಇದಕ್ಕೆ ಕೋರ್ಟ್ ಸಮ್ಮತಿಸಿದೆ ಎನ್ನಲಾಗಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಾಂತರಿಸಲಾಗುವುದು. ಈ ಕಟ್ಟುನಿಟ್ಟಿನ ಕ್ರಮದ ಹಿನ್ನೆಲೆ ಆರೋಪಿ ಸಮ್ಮು ಕಾರಾಗೃಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಆರೋಪಗಳನ್ನು ಮಾಡಿದ್ದಾನೆಂದು ಕಾರಾಗೃಹ ಇಲಾಖೆ ಉನ್ನತ ಮೂಲಗಳು ಹೇಳಿವೆ.
ವರದಿ ಸಲ್ಲಿಕೆಗೆ ಆದೇಶ
ನಟ ದರ್ಶನ್ ಪ್ರಕರಣದ ಹಿನ್ನೆಲೆಯಲ್ಲಿ ಇಲಾಖೆ ಮಹಾನಿರ್ದೇಶಕರು ರಾಜ್ಯದ ಎಲ್ಲ ಕಾರಾಗೃಹಗಳಿಂದ ಆ.27 ರೊಳಗೆ ವರದಿ ಕೇಳಿದ್ದಾರೆ. ಜೈಲಿನ ಬ್ಯಾರೆಕ್, ನಿಷೇಧಿತ ವಸ್ತುಗಳು ಇಲ್ಲವೆಂದು ಖಚಿತಪಡಿಸಿಕೊಂಡು ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಜೈಲು ಅಧಿಕಾರಿಗಳಿಗೆ ಮಹಾನಿರ್ದೇಶಕ ಕಚೇರಿ ನಿರ್ದೇಶಿಸಿದೆ.
ಭರ್ತಿಯಾಗುತ್ತಿದೆ ಜೈಲು
ಮೂನ್ನೂರು ಕೈದಿಗಳ ಸಾಮರ್ಥ್ಯದ ಚಿತ್ರದುರ್ಗ ಜಿಲ್ಲಾ ಕಾರಾಗೃಹ ಹೆಚ್ಚು ಕಡಿಮೆ ಭರ್ತಿಯಾಗಿರುತ್ತದೆ. ಅಲ್ಲದೆ ಈ ಜೈಲಿಗೆ ಅಕ್ಕಪಕ್ಕ ದ ಕಾರಾಗೃಹಗಳಿಂದಲೂ ಕೈದಿಗಳು ವರ್ಗಾವಣೆಯಾಗಿದ್ದಾರೆ. 27 ವಾರ್ಡರ್‌ಗಳ ಪೈಕಿ 5 ಖಾಲಿ ಇವೆ. 10 ಪುರುಷ ಹಾಗೂ 12 ಮಹಿಳಾ ವಾರ್ಡರ್‌ಗಳು ಕರ್ತವ್ಯದಲ್ಲಿದ್ದು, ಸಿಬ್ಬಂದಿ ಕೊರತೆ ಕಾರಣಕ್ಕೆ ಬ್ಯಾರೆಕ್, ಸೆಲ್‌ಗಳಿಗೆ ಸಮರ್ಪಕವಾಗಿ ಸಿಬ್ಬಂದಿ ನಿಯೋಜಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತವಾಗಿದೆ.

(ಸಿಟಿಡಿ 27 ಚಿತ್ರದುರ್ಗ ಜೈಲು)