ಬೀಳೂರು ಗುರುಬಸವ ಸ್ವಾಮೀಜಿ. 
ಜಿಲ್ಲೆ

ಸೆ.೮, ೯ ರಂದು ಬೀಳೂರು ಗುರುಬಸವ ಸ್ವಾಮಿಗಳ ಪುಣ್ಯ ಸ್ಮರಣೆ

ಬಾಗಲಕೋಟೆ: ನಗರದ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ ಬೀಳೂರ ಗುರುಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಶ್ರಾವಣ ಮಾಸದ ಉತ್ಸವ ಸೆ.೮ ಹಾಗೂ ೯ ರಂದು ಹಮ್ಮಿಕೊಳ್ಳಲಾಗಿದೆ.

ಸೆ. ೮ ರಂದು ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಬಿವಿವಿ ಸಂಘದ ಆವರಣದಲ್ಲಿರುವ ಬೀಳೂರು ಗುರು ಬಸವ ಸ್ವಾಮೀಜಿಗಳ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ ಬೀಳೂರು ಅಜ್ಜನ ದೇವಾಲಯದಲ್ಲಿ ವಿಶೇಷ ಪೂಜೆ ಮಹಾಮಂಗಳಾರುತಿ ನಂತರ ರಾತ್ರಿ ೧೦ ಗಂಟೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ಸೆ.೯ ರಂದು ಬೆಳಗ್ಗೆ ಗುರುಬಸವ ಮಹಾಸ್ವಾಮಿಗಳ ಶೀಲಾ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾಷ್ಟಕಂ, ಲಿಂಗಾಷ್ಟಕಂ ಹಾಗೂ ಶಿವ ಪಂಚಾಕ್ಷರಮಂತ್ರ ಸ್ತೋತ್ರಂ, ಶಿವ ಸಹಸ್ರನಾಮ ಸ್ತೋತ್ರಗಳಿಂದ ಪೂಜೆ ಸಲ್ಲಿಸಿ ಪುಷ್ಪಾಲಂಕಾರ, ಮಹಾಮಂಗಳಾರುತಿ ಜರುಗುವುದು. ನಂತರ ೯ ಗಂಟೆಗೆ ಚರಂತಿಮಠದ ಪ್ರಭುಸ್ವಾಮಿಗಳು ಹಾಗೂ ಬೀಳೂರಿನ ಮುರಘೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಅಂದು ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ೧೦.೩೦ ಗಂಟೆಗೆ ಬೀಳೂರ ಗುರುಬಸವ ಮಹಾಸ್ವಾಮಿಗಳ ಸಂಸ್ಮರಣ ಕಾರ್ಯಕ್ರಮ ನಡೆಯಲಿದ್ದು, ಚರಂತಿಮಠದ ಪ್ರಭು ಸ್ವಾಮೀಜಿ, ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಣದಾಳದ ಕಲ್ಯಾಣ ಹಿರೇಮಠದ ಡಾ.ವಿವೇಕಾನಂದ ದೇವರು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಉಪಸ್ಥಿತರಿರುವರು. ಅಂದು ಬೆಳಗ್ಗೆ ೧೧ ರಿಂದ ಮದ್ಯಾಹ್ನ ೩ ಗಂಟೆವರೆಗೂ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ಅನ್ನಸಂತರ್ಪಣೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.