ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಬಹುಭಾಷಾ ಕವಿ ಗೋಷ್ಠಿ ಸೆ.೨೫ ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಿನ ಪೂರ್ತಿ ನಡೆಯುವ ಮೂಲಕ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆಯೆಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಭಾಷಾ ಕವಿಗೋಷ್ಠಿಯ ಆರಂಭಕ್ಕೂ ಮುನ್ನ ಅಂದು ಬೆಳಗ್ಗೆ ೯ ಗಂಟೆಗೆ ಗಾಂಧಿ ಮೈದಾನ ರಸ್ತೆಯ ಬಳಿಯಲ್ಲಿರುವ, ಡಿಸಿಸಿ ಬ್ಯಾಂಕ್ ಮುಂಭಾಗದ ಕುವೆಂಪು ಪುತ್ತಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕವಿಗೋಷ್ಠಿಯ ಅಧ್ಯಕ್ಷೆ ಸಾಹಿತಿ ಸುನೀತಾ ಲೋಕೇಶ್ ಚಾಲನೆ ನೀಡಲಿದ್ದಾರೆ. ಬಳಿಕ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭಗೊಳ್ಳುವ ಬಹುಭಾಷಾ ಕವಿಗೋಷ್ಠಿಯನ್ನು ಕರ್ನಾಟಕ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕರು, ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಸುನೀತಾ ಲೋಕೇಶ್ ವಹಿಸಲಿದ್ದು, ವಿಶೇಷ ಅತಿಥಿಯಾಗಿ ಕೆ.ಜಿ.ಎಫ್, ಸಲಾರ್ ಚಲನ ಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ರೆಡ್‌ಕ್ರಾಸ್ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ, ನಗರಸಭಾ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ, ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿಗಳಾದ ಕ್ಯಾಪ್ಟನ್ ಬಿದ್ದಂಡ ನಾಣಯ್ಯ(ನಾಣಿ), ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ಪಿ.ಕಲಾವತಿ, ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ.
ಬಹುಭಾಷಾ ಕವಿಗೋಷ್ಠಿಗೆ ಆಯ್ಕೆಯಾದ ಕವನಗಳ ಸಂಕಲನ ಕಾವ್ಯ ಕಲರವವನ್ನು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷೆ ಸುನೀತಾ ಲೋಕೇಶ್ ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭ ಡಿ.ಹೆಚ್.ಪುಷ್ಪ ಅವರು ರಚಿಸಿರುವ ಸಂವೇದನೆ ಕವನ ಸಂಕಲನ ಮತ್ತು ಶೋಭಾ ರಕ್ಷಿತ್ ಅವರ ಮನಸೆಳೆದ ಹಿಮಗಿರಿ ಪ್ರವಾಸ ಕಥನ ಪುಸ್ತಕಗಳನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಕವಿಗೋಷ್ಠಿಯ ಕವನ ವಾಚನದ ಬಳಿಕ ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಬಿ.ಆರ್.ಜೋಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಉಜ್ವಲ್ ರಂಜಿತ್ ಮಾಹಿತಿ ನೀಡಿದ್ದಾರೆ.