ಬಾಗಲಕೋಟೆ: ನವನಗರದ ಸೆಕ್ಟರ್ ನಂ.೩ರಲ್ಲಿ ನಿರ್ಮಿಸಲಾಗಿರುವ ಪ್ರಸನ್ನ ವೆಂಕಟದಾಸರ ಸ್ಮಾರಕ ಉದ್ಘಾಟನೆ ಹಾಗೂ ಆರಾಧನೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.೧೨ ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸುಭಾಸ್ ಕಾಖಂಡಕಿ ಹೇಳಿದರು.
ನವನಗರದ ಪ್ರಸನ್ನ ಮಾರುತಿ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯರು, ಸ್ವಾಮಿ ರಾಮದಾಸರಂತೆ ಪ್ರಸನ್ನ ವೆಂಕಟದಾಸರು ಸಹ ಹಿಂದುತ್ವ ಪುನರುತ್ಥಾನಕ್ಕೆ ಶ್ರಮಿಸಿದ ರಾಜರಿಗೆ ರಾಜುಗುರುವಾಗಿದ್ದವರು, ಪೇಶ್ವೆಗಳಿಗೆ ರಾಜಗುರುವಾಗಿದ್ದರು. ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಪ್ರಸನ್ನ ವೆಂಕಟದಾಸರ ಸ್ಮಾರಕ ಭವನದ ನೆಲಮಹಡಿ ಕಾರ್ಯಪೂರ್ಣಗೊಂಡಿದ್ದು, ಮೊದಲ ಮಹಡಿಯಲ್ಲಿ ಸಂಶೋಧನಾ ಕೇಂದ್ರವನ್ನು ನಿರ್ಮಿಸುವ ಗುರಿಯಿದೆ. ಅಲ್ಲಿ ೧೦ ಸಾವಿರಕ್ಕೂ ಅಧಿಕ ಕೃತಿಗಳನ್ನು ಇರಿಸಲಾಗುತ್ತದೆ ಎಂದು ವಿವರಿಸಿದರು.
ಒಟ್ಟು ಮೂರು ಕೋಟಿ ರೂ. ವೆಚ್ಚದಲ್ಲಿ ಪೂರ್ಣ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಕಟ್ಟಡಕ್ಕಾಗಿ ಸಂಸದ ಪಿ.ಸಿ.ಗದ್ದಿಗೌಡರ ಅವರು ೫ ಲಕ್ಷ ರೂ.ಗಳನ್ನು ನೀಡಿದ್ದಾರೆ. ಇನ್ನುಳಿದಿದ್ದನ್ನು ಟ್ರಸ್ಟ್ ಹಾಗೂ ಭಕ್ತರ ಮೂಲಕವೇ ಸಂಗ್ರಹಿಸಿ ನಿರ್ಮಿಸಲಾಗಿದೆ. ಪ್ರಸನ್ನ ವೆಂಕಟದಾಸರ ಅಧ್ಯಯನ ಪೀಠ ಸ್ಥಾಪಿಸುವ ಗುರಿಯಿದೆ. ಕನಕದಾಸರ ಅಧ್ಯಯನ ಪೀಠ ಬಿಟ್ಟರೆ ದೇಶದಲ್ಲೇ ನಮ್ಮದು ಎರಡನೇ ಅಧ್ಯಯನ ಪೀಠವಾಗಲಿದೆ. ಇದು ಕೇವಲ ಸಾರ್ವಜನಿಕರ ದೇಣಿಗೆಯಿಂದ ಆಗುವ ಕೆಲಸವನ್ನು ದಾಸ ಸಾಹಿತ ಹಾಗೂ ವಚನ ಸಾಹಿತ್ಯ ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಹಾಗಾಗಿ ಸರ್ಕಾರ ನೆರವು ನೀಡಲು ಮುಂದಾಗಬೇಕೆಂದು ವಿನಂತಿಸಿಕೊಂಡರು.
ಸೆ.೧೨ ರಿಂದ ಕಾರ್ಯಕ್ರಮ:
ಸೆ.೧೨ರಂದು ಸ್ಮಾರಕ ಭವನ ಉದ್ಘಾಟನೆ ಹಾಗೂ ಆರಾಧನೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಸಂಜೆ ೪.೩೦ಕ್ಕೆ ನಡೆಯುವ ಸಮಾರಂಭಕ್ಕೆ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂತ್ರಾಲಯದ ಶ್ರೀಗುರುಸಾರ್ವಭೌಮ ಹರಿದಾಸ ಸಾಹಿತ್ಯ ಪ್ರಾಜೆಕ್ಟ್ನ ಗೌರವ ನಿರ್ದೇಶಕ ಕೆ.ಅಪ್ಪಣಾಚಾರ್ಯ ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ಹಾಗೂ ಬಿಂದುಮಾಧವಾಚಾರ್ಯ ನಾಗಸಂಪಿಗೆ, ಗಾಯಕ ಪಂ. ಅನಂತ ಕುಲಕರ್ಣಿ, ಟ್ರಸ್ಟ್ ಕರ್ನಲ್ ಅನಂತ ಕಾಖಂಡಕಿ ಮತ್ತಿತರರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸಾಧಕರಾದ ಬಿವಿವಿ ಸಂಘದ ತಾಂತ್ರಿಕ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್, ಬಿಇಸಿ ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಹರವಿ, ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ, ದ.ರಾ.ಪುರೋಹಿತ ಅವರನ್ನು ಸನ್ಮಾನಿಸಲಾಗುತ್ತಿದೆ. ಸಂಜೆ ೭.೩೦ಕ್ಕೆ ವಿದುಷಿ ಪರಿಮಳಾ ವ್ಯಾಸರಾವ್ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸೆ.೧೪ರಂದು ಸಮ್ಮೇಳನ:
ಕಾರ್ಯಕ್ರಮದ ಭಾಗವಾಗಿ ಸೆ.೧೪ರಂದು ೧೪ನೇ ಒಂದು ದಿನದ ಹರಿದಾಸ ಸಾಹಿತ್ಯ ಸಮ್ಮೇಳನ ಜರುಗಲಿದೆ. ಶ್ರೀಪ್ರಸನ್ನ ವೆಂಕಟದಾಸರ ಕೃತಿಗಳ ಒಳನೋಟ ಮತ್ತು ಚಿಂತನೆ ಕುರಿತಾಗಿ ಜರುಗಲಿರುವ ಸಮ್ಮೇಳನದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಂತ್ರಾಲಯದ ಕೆ.ಅಪ್ಪಣಾಚಾರ್ಯ, ಹಿರಿಯ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಸೇರಿ ಗಣ್ಯರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಪ್ರಸನ್ನ ವೆಂಕಟದಾಸರ ಬದುಕು, ಬರಹ ಕುರಿತಾದ ನಾಲ್ಕು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ವಿವಿಧ ಗೋಷ್ಠಿಗಳು ಕಾರ್ಯಕ್ರಮದಲ್ಲಿ ಜರುಗಲಿವೆ.
ಸೆ.೧೫ ಭಜನಾ ಮಂಡಳಿಗಳಿಂದ ಮಹಿಳಾ ಗೋಷ್ಠಿ ಜರುಗಲಿದ್ದು, ಸೆ.೧೬ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಪ್ರಸನ್ನ ವೆಂಕಟದಾಸರ ಚಲನಚಿತ್ರ ಪ್ರದರ್ಶನ ಜರುಗಲಿದೆ. ಶಾಸಕ ಎಚ್.ವೈ.ಮೇಟಿ, ವಿಪ ಸದಸ್ಯ ಪಿ.ಎಚ್.ಪೂಜಾರ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಖ್ಯಾತ ಕಾದಂಬರಿಗಾರ್ತಿ ಡಾ.ರೇಖಾ ಕಾಖಂಡಕಿ, ಎಸ್.ಬಿ.ದೇಶಪಾಂಡೆ, ಶ್ರೀನಿವಾಸ ಸಂಗಮ, ವ್ಯಾಸರಾಜ ಕಾಖಂಡಕಿ, ಗುರುರಾಜ ಕುಲಕರ್ಣಿ ಸೇರಿ ಇತರರು ಇದ್ದರು.