ಜಿಲ್ಲೆ

ಸೆ. 9ರಂದು ಡಿಸಿ ಕಚೇರಿ ಎದುರು ತಮಟೆ ಚಳವಳಿ ಮೂಲಕ ಪ್ರತಿಭಟನೆ

ಹಾಸನ: ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸೆ. 9ರಂದು ಜಿಲ್ಲಾಧಿಕಾರಿ ಕಚೇರಿ ಎದುರು ತಮಟೆ ಚಳವಳಿ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಎನ್.ಮೂರ್ತಿ ಹೇಳಿದರು.
ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್‌ತೀರ್ಪು ಬಂದು ಒಂದು ತಿಂಗಳಾದರೂ ಸಿಎಂ ಸಿದ್ದರಾಮಯ್ಯ ಗಮನ ಹರಿಸಿಲ್ಲ. ತೀರ್ಪು ಸ್ವಾಗತಿಸಿದ್ದಾರೆ ಎಂಬುದನ್ನು ಹೊರತುಪಡಿಸಿ ಬೇರೆ ಏನೂ ಮಾಡಿಲ್ಲ. ಹೀಗಾಗಿ ಸೆ. 9 ಸೋಮವಾರ ರಂದು ತಮಟೆ ಚಳವಳಿ ಮೂಲಕ ಮನವಿ ಸಲ್ಲಿಸಲಾಗುವುದು. ರಾಜ್ಯದ ಎಲ್ಲಾ ಕಡೆ ಪ್ರಿಭಟನೆ ಮಾಡಲಾಗುವುದು ಅದೇ ರೀತಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಿಂದ ಸಿಎಂ ನಿವಾಸದ ವರೆಗೆ ಪಾದಯಾತ್ರೆ ನಡೆಸಲಾಗುವುದು. ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಮೀಸಲಾತಿ ಸಮಾನವಾಗಿ ಹಂಚಿಕೆಯಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಕ್ಕಲಿಗ, ಜಾಡಮಾಲಿ, ಸಮಗಾರ, ಮಾದಿಗ ಹೀಗೆ ಅನೇಕ ಸಮಾಜಗಳು ತೊಂದರೆ ಅನುಭವಿಸುತ್ತಿವೆ. ಶಿಕ್ಷಣ ಸಿಗದೆ ಇವತ್ತಿಗೂ ಒಂದೇ ಒಂದು ಸರ್ಕಾರಿ ನೌಕರಿ ಪಡೆಯಲು ದಕ್ಕಲಿಗ ಸಮಾಜದಲ್ಲಿ ಆಗಿಲ್ಲ. 2013 ,ರಿಂದ 2018ರ ವರೆಗೆ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯ ನ್ಯಾ.ಸದಾಶಿವ ಆಯೋಗ ಜಾರಿಗೆ ಪ್ರಯತ್ನ ಮಾಡಲಿಲ್ಲ. ಕಾಂಗ್ರೆಸ್ ದಲಿತರನ್ನ ಕೇವಲ ಓಟ ಬ್ಯಾಂಕ್ ಆಗಿ ಮಾಡಿಕೊಂಡಿದೆ. ಕಾಂಗ್ರೆಸ್ ನವರು ಮೃದು ಕೋಮುವಾದಿಗಳಾಗಿದ್ದಾರೆಂದು ದೂರಿದರು.
ಗ್ಯಾರಂಟಿಗಾಗಿ ದಲಿತರ 25 ಸಾವಿರ ಕೋಟಿ ರೂ. ಅನುದಾನವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಆ ಹಣವನ್ನು ವಾಪಾಸ್ ಕೊಡಬೇಕು. ಮೆರಿಟ್ ವಿದ್ಯಾರ್ಥಿಗಳ ವೇತನ ಮತ್ತು ವಿದೇಶ ವ್ಯಾಸಂಗದ ಪ್ರಬುದ್ಧ ಯೋಜನೆ ರದ್ದುಪಡಿಸಿದ್ದಾರೆ. ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದ್ದಾರೆ. ಯಾವ ಅಭಿವೃದ್ಧಿ ರಾಜ್ಯದಲ್ಲಿ ನಡೆಯುತ್ತಿಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಧರ್ಮ, ಜಿಲ್ಲಾ ಉಪಾಧ್ಯಕ್ಷ ದೇವರಾಜ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಮಂಜು, ಹೊನ್ನಯ್ಯ ಇದ್ದರು.