ಚಾಮರಾಜನಗರ: ಜಿಲ್ಲಾ ರೋಟರಿ ಸಿಲ್ಕ್ ಸಿಟಿ ವತಿಯಿಂದ ಸೇವಾನಿಧಿ ಸಂಗ್ರಹದ ಉದ್ದೇಶದಿಂದ ಸೆ.6 ರಂದು ಸ್ಟಾಂಡಪ್ ಕಾಮಿಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರೋಟರಿ ಸಿಲ್ಕ್ ಸಿಟಿ ಜಿಲ್ಲಾ ಗವರ್ನರ್ ರೋಟರಿಯನ್ ರಾಮಕೃಷ್ಣ ತಿಳಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಂಜೆ 6 ಗಂಟೆಯಿಂದ 8.30 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ ಆಚಾರ್ಯ ಅವರು ಸ್ಟಾಂಡಪ್ ಕಾಮಿಡಿ ನಡೆಸಿಕೊಡಲಿದ್ದಾರೆ. ಸೇವಾನಿಧಿ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದ್ದೇವೆ. ಅದಲ್ಲದೇ ಸಮಾಜಕ್ಕೆ ಅಗತ್ಯವಾದ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೋಟರಿ ಸಿಲ್ಕ್ ಸಿಟಿ ವತಿಯಿಂದ ಮೈಸೂರಿನ ಅಮೃತಾ ಕೃಪ ಆಸ್ಪತ್ರೆಗೆ ಲ್ಯಾಪೋಸ್ಕೋಪಿಕ್ ಯಂತ್ರಗಳ ವಿತರಣೆ, ಸರಗೂರು ವಿವೇಕಾನಂದ ಆಸ್ಪತ್ರೆಗೆ ಕಣ್ಣಿನ ಶಸ್ತ್ರಚಿಕಿತ್ಸೆ ಬೇಕಾದ ಯಂತ್ರಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ರಕ್ತನಿಧಿ ಕೇಂದ್ರಕ್ಕೆ ಯಂತ್ರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಚಿಂತನೆಯನ್ನು ಒಟ್ಟುಕೊಂಡಿದ್ದೇವೆ ಎಂದರು.
ಸಹಾಯಕ ಗವರ್ನರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ರೋಟರಿ ಸಿಲ್ಕ್ ಸಿಟಿ ವತಿಯಿಂದ ಅನಾರೋಗ್ಯ ಆದವರು, ಕ್ರೀಡಾಪಟುಗಳಿಗೆ ನೆರವು ನೀಡಲಾಗುತ್ತಿದ್ದು ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಕ್ಯಾನ್ಸರ್ ತಪಾಸಣೆ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ನಡೆಸಿದ ಆಹಾರ ಮೇಳ ಮತ್ತು ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅದರಂತೆ ವೀಕ್ ಅಂಡ್ ವಿತ್ ಆಚಾರ್ಯ ಎಂಬ ಕಾಮಿಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೋಟರಿ ಸಿಲ್ಕ್ ಸಿಟಿ ಜಿಲ್ಲಾಧ್ಯಕ್ಷ ಎಚ್.ವಿ.ಶಮಿತ್ ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಮಾಜಿ ಅಧ್ಯಕ್ಷ ಡಿ.ಪಿ.ವಿಶ್ವಾಸ್, ಚೈತನ್ಯ ಜಿ.ಹೆಗ್ಗಡೆ ಹಾಜರಿದ್ದರು.