ಜಿಲ್ಲೆ

ಸೆ.6 ರಂದು ಗೋ ಬ್ಯಾಕ್ ಗವರ್ನರ್

ಬಳ್ಳಾರಿ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಪಕ್ಷಪಾತಿ ಧೋರಣೆ ಖಂಡಿಸಿ, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಮಿತಿಯಿಂದ ಸೆ.06 ರಂದು ನಗರದಲ್ಲಿ ಗೋ ಬ್ಯಾಕ್ ಗವರ್ನರ್ ಚಳವಳಿಯ ಅಂಗವಾಗಿ ಕಪ್ಪುಪಟ್ಟಿ, ಬಾವುಟ ಪ್ರದರ್ಶಿಸಲಾಗುವುದು ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವವು ದಿನದಂದೇ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಲಾಗುವುದು. ರಾಜ್ಯಪಾಲರು ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಈ ನಡೆಯಿಂದಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ರಾಜ್ಯಪಾಲರು ಕೇಂದ್ರದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಎ.ಮಾನಯ್ಯ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯ ಆರೋಪ ಮಾಡುವ ಕುತಂತ್ರ ನಡೆಸಿದ್ದಾರೆ. ಕೇಂದ್ರ ಸರ್ಕಾರ ದೇಶದ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ, ಕೇಂದ್ರ ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಜನರಿಗೆ ತಿಳಿಸುವ ಪ್ರಯತ್ನ ನಮ್ಮ ಹೋರಾಟದ ಮೂಲಕ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರಮುಖರಾದ ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಮುಖಂಡರಾದ ಪಿ.ಜಗನ್ನಾಥ, ಮೊಹಮ್ಮದ್ ರಫೀಕ್, ಕೆ.ಎರ‌್ರಿಸ್ವಾಮಿ, ಕೆರಕೋಡಪ್ಪ, ಗಾದಿಲಿಂಗಪ್ಪ, ಕಪ್ಪಗಲ್ಲು ಓಂಕಾರೆಪ್ಪ ಇದ್ದರು.