ಹಾಸನ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ಸೆ.3ರಂದು ಬೇಲೂರು ತಾಲೂಕು ಪುಷ್ಪಗಿರಿ ಮಠದ ಮಹಾ ಸಂಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ತಿಳಿಸಿದರು.
ನನ್ನ 40 ವರ್ಷಗಳ ಗ್ರಹಿಕೆ ಪ್ರಕಾರ, ಕೇಂದ್ರ ಕಸಾಪ ಸರ್ವ ಸದಸ್ಯರ ಸಭೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಇದೇ ಮೊದಲು. ಆಯೋಜನೆ ಜವಾಬ್ದಾರಿ ಈ ಬಾರಿ ಹಾಸನ ಜಿಲ್ಲಾ ಘಟಕಕ್ಕೆ ಸಿಕ್ಕಿದೆ. ಕಸಾಪ ಎಲ್ಲಾ ಸದಸ್ಯರು ಭಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಅವರ ಆಗಮನಕ್ಕೆ ಸಿದ್ಧತಾ ಕಾರ್ಯ ನಡೆಯುತ್ತಿದೆ. ಎಲ್ಲ ಸರ್ವ ಸದಸ್ಯರೊಂದಿಗೆ ನಮ್ಮ ಜಿಲ್ಲೆಯ ಸದಸ್ಯರೂ ಭಾಗಿಯಾಗಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆ ಸಾರ್ಥಕಗೊಳಿಸಬೇಕು ಎಂದು ಹೇಳಿದರು.
ಸದಸ್ಯತ್ವ ಅಭಿಯಾನ:
ಜಿಲ್ಲೆಯ ನಾಗರಿಕ ಬಂಧುಗಳಿಗೆ ತಿಳಿಸುವ ಮತ್ತೊಂದು ಸಂಗತಿ ಏನೆಂದರೆ ಸರ್ವ ಸದಸ್ಯರ ಸಭೆ ಮುಗಿದ ನಂತರ ಸದಸ್ಯತ್ವ ಅಭಿಯಾನ ಶುರುವಾಗಲಿದೆ. ಜಿಲ್ಲೆ, ತಾಲೂಕು, ಹೋಬಳಿ ಘಟಕದಿಂದ ಅಭಿಯಾನ ನಡೆಸಲಾಗುತ್ತಿದ್ದು, ವಿಶೇಷ ಚೇತನರು ಹಾಗೂ ಸೈನಿಕರು, ಅರೆ ಸೈನಿಕರು ಉಚಿತವಾಗಿ ಸದಸ್ಯತ್ವ ಪಡೆಯಬಹುದು. ಉಳಿದವರಿಗೆ ನಿಯಮಾವಳಿ ಪ್ರಕಾರ 410 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 150 ರೂ. ಸ್ಮಾರ್ಟ್ ಕಾರ್ಡ್ ಶುಲ್ಕ ಹಾಗೂ 10 ರೂ. ಅರ್ಜಿ ಶುಲ್ಕ ಸೇರಲಿದೆ. ಜಿಲ್ಲಾ ಕಸಾಪ ಕಚೇರಿಯಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಎರಡು ಫೋಟೋ ಜತೆಗೆ ಆಧಾರ್ ಕಾರ್ಡ್ ನಕಲು ಪ್ರತಿ ತಂದು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಸಹ ಸಲ್ಲಿಕೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೊಸಬರು ಅಂದಾಜು 5 ಸಾವಿರ ಸೇರಿದಂತೆ ಈವರೆಗೆ 17 ಸಾವಿರ ಮಂದಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂಬ ಆಶಯದಿಂದ ಆಂದೋಲನ ಮಾಡುತ್ತಿದ್ದೇವೆ. ನಮ್ಮ ಗುರಿ 25 ಮಂದಿಯನ್ನು ನೋಂದಣಿ ಮಾಡಿಸಬೇಕು ಎಂಬುದಾಗಿದೆ. ರಾಜ್ಯದಲ್ಲಿ ಸುಮಾರು 1.25 ಲಕ್ಷ ಮಂದಿ ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ.ಆರ್.ಬೊಮ್ಮೇಗೌಡ, ಜಾವಗಲ್ ಪ್ರಸನ್ನ ಕುಮಾರ್, ಕೋಶಾಧ್ಯಕ್ಷ ಜಯರಾಂ, ಸಂಘಟನಾ ಕಾರ್ಯದರ್ಶಿ ಶಂಕರ್ ಹಾಗೂ ಮಾರ್ಗದರ್ಶಿ ಸಮಿತಿ ಸದಸ್ಯ ಪ್ರಕಾಶ್ ಇದ್ದರು.