ಬಸವನಬಾಗೇವಾಡಿ: ರಾಜ್ಯದ ವಿವಿಧೆಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿರುವ ಶ್ರೇಯಸ್ಸು ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳಿಗೆ ಸಲ್ಲುತ್ತದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಹಾನಗಲ್ಲ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಕ್ಕೆ ವೀರಶೈವ ಪರಂಪರೆ ಮಾದರಿಯಾಗಿದೆ. ನಾಡಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯಾವುದೇ ಸರ್ಕಾರ ಮಾಡದೇ ಇರುವ ಅನೇಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಹಾನಗಲ್ಲ ಕುಮಾರ ಶ್ರೀಗಳ 165ನೇ ಜಯಂತಿ ಅಂಗವಾಗಿ ಸೆ. 24ರಿಂದ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಾಡಿನ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ನಡೆಯುತ್ತವೆ. ಈ ನೆಲದಲ್ಲಿ ಇದುವರೆಗೆ ಅನೇಕ ಕಾರ್ಯಕ್ರಮಗಳನ್ನು ಎಲ್ಲರೂ ಕೂಡಿಕೊಂಡು ಸಾಮರಸ್ಯದೊಂದಿಗೆ ಯಶಸ್ವಿಗೊಳಿಸಲಾಗಿದೆ. ಅದೇ ರೀತಿಯಲ್ಲಿ ಎಲ್ಲರೂ ಸಹಕಾರ ನೀಡಿದರೆ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ ಎಂದರು.
ಹಾನಗಲ್ಲ ಕುಮಾರ ಶ್ರೀಗಳು, ಬಂಥನಾಳ ಶ್ರೀಗಳಿಗೆ ಪ್ರೇರಣೆ ನೀಡುವ ಮೂಲಕ ರಾಜ್ಯದ ವಿವಿಧಡೆ ಕೆಎಲ್‌ಇ ಸಂಸ್ಥೆ ಸೇರಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುವಲ್ಲಿ ಪ್ರೇರಣಾದಾಯಕರು. ಇವರ ಕಾರ್ಯವನ್ನು ಸಮಾಜ ಎಂದು ಮರೆಯಬಾರದು. ಇವರ ಜಯಂತಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಮಕಾಲೀನ ಬಸವಾದಿ ಶರಣರು ನಾಡಿಗೆ ನೀಡಿರುವ ಕೊಡುಗೆಯನ್ನು ಪಸರಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವೀರಶೈವ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶರಣರ ಕಾಯಕ, ಅಕ್ಷರ, ಅನ್ನ ದಾಸೋಹ, ಆಸರೆಯಂತಹ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಯರನಾಳದ ಸಂಗನಬಸವ ಶ್ರೀಗಳು, ಇಂಗಳೇಶ್ವರದ ವಚನ ಶಿಲಾಮಂಟಪದ ಚನ್ನಬಸವ ಶ್ರೀಗಳು, ಪಟ್ಟಣದ ಶಿವಪ್ರಕಾಶ ಶಿವಾಚಾರ್ಯರು, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಮಸಿಬಿನಾಳದ ವಿರಕ್ತಮಠದ ಸಿದ್ಧರಾಮ ಶ್ರೀಗಳು, ಬೀಳಗಿಯ ಗುರುಪಾದ ಶಿವಾಚಾರ್ಯರು ಮಾತನಾಡಿ, ಹಾನಗಲ್ಲ ಕುಮಾರ ಶ್ರೀಗಳ, ಆಚಾರ, ವಿಚಾರಗಳು ಅವರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅವರು ಸ್ಥಾಪಿಸಿದ ಅನೇಕ ಸಂಸ್ಥೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಕರಭಂಟನಾಳ ಶಿವಕುಮಾರ ಶ್ರೀಗಳು, ಹಾವೇರಿಯ ಸದಾಶಿವ ಶ್ರೀಗಳು, ಘಟಪ್ರಭಾ ಮಲ್ಲಿಕಾರ್ಜುನ ಶ್ರೀಗಳು, ಅಕ್ಕಿಆಲೂರು ಶಿವಬಸವ ಶ್ರೀಗಳು, ಹುಕ್ಕೇರಿಯ ಶಿವಬಸವ ಶ್ರೀಗಳು, ಅರಳಿಕಟ್ಟಿಯ ಶಿವಮೂರ್ತಿ ಶ್ರೀಗಳು, ಶಿವಲಿಂಗ ಶ್ರೀಗಳು, ಶಿವಕುಮಾರ ದೇವರು, ಚನ್ನಬಸವ ದೇವರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಭಾಗವಹಿಸಿದ್ದರು.
ಶಿವಪ್ರಸಾದ ದೇವರು ಸ್ವಾಗತಿಸಿದರು. ಶಿಕ್ಷಕ ಎಚ್.ಬಿ. ಬಾರಿಕಾಯಿ ನಿರೂಪಿಸಿದರು.