ಜಿಲ್ಲೆ

ಸೆ.23ರಂದು ‘ರತ್ನಾಕರ್ ನೆನಪು’ ಕಾರ್ಯಕ್ರಮ

ಮೈಸೂರು: ಹಾಸ್ಯಕಲಾವಿದ ರತ್ನಾಕರ್ ನೆನಪಿನಲ್ಲಿ ರತ್ನಾಕರ್ ಅಭಿಮಾನಿ ಬಳಗದಿಂದ ಸೆ.23ರಂದು ‘ರತ್ನಾಕರ್ ನೆನಪು’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರತ್ನಾಕರ್ ಪುತ್ರ ರಾಘವೇಂದ್ರ ತಿಳಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು, ರತ್ನಾಕರ್ ರಚಿಸಿರುವ ಗೀತೆಗಳ ಗಾಯನ ಕಾರ್ಯಕ್ರಮ ಇರಲಿದೆ. ಮೂರು ತಲೆಮಾರಿನಿಂದ ನಮ್ಮ ಕುಟುಂಬ ಹಾಡುತ್ತಾ ಬಂದಿರುವ ಭಕ್ತಿಗೀತೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತತ ಪಡಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇಯರ್ ಶಿವಕುಮಾರ್, ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕೃಪಾ ಫಡ್ಕೆ ಶಿಷ್ಯರಿಂದ ನೃತ್ಯಾಂಜಲಿ, ರತ್ನಾಕರ್ ನೆನಪು ಸಾಕ್ಷೃಚಿತ್ರ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
60-70ರ ದಶಕದಲ್ಲಿನ ಹಾಸ್ಯ ನಟರಲ್ಲಿ ರತ್ನಾಕರ್ ಸಹ ಪ್ರಮುಖರಾಗಿದ್ದರು. ತಮ್ಮ ವಿಶಿಷ್ಟ ಧ್ವನಿಯಿಂದ ಹೆಸರು ಮಾಡಿದ್ದ ಇವರು ಎಂ.ವಿ.ರಾಜಮ್ಮ ಮತ್ತು ಬಿ.ಆರ್.ಪಂತಲು ನಿರ್ಮಾಣದ ವಿಚಿತ್ರ ಪ್ರಪಂಚ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಸುಮಾರು 500 ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಂಡಿದ್ದಾರೆ. ಕೆಲ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಹೀಗಾಗಿ ಇವರನ್ನು ಸ್ಮರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ರಂಗಕರ್ಮಿ ನಾ.ನಾಗಚಂದ್ರ, ಗಾಯಕಿ ಡಾ.ಪ್ರೀತಂ ರತ್ನಾಕರ್ ಇದ್ದರು.