ಜಿಲ್ಲೆ

ಸೆ.20,21 ರಂದು ನಗರದ ಕಲಾಭವನದಲ್ಲಿ ನಾಟಕೋತ್ಸವ

ಹಾಸನ: ನೆಲದನಿ ಮತ್ತು ಮಾಯ್ಕ ರಂಗ ತಂಡಗಳಿಂದ ಸೆ.20 ಮತ್ತು 21 ರಂದು ನಗರದ ಹಾಸನಾಂಬ ಕಲಾಭವನದಲ್ಲಿ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗ ಸಂಘಟಕ ಸಂತೋಷ್ ದಿಂಡಗೂರು ತಿಳಿಸಿದರು.
ನಗರದ ಪ್ರಗತಿಪರ ಹಾಗೂ ಹಲವು ದಲಿತ ಸಂಘಟನೆಗಳು ಬೆಂಬಲ ನೀಡಿವೆ. ಹಲವು ಆಯಾಮಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಜಂಗಮ ಕಲೆಕ್ಟಿವ್, ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನಲೆಯ ಕಲಾವಿದರ ಸಮೂಹ ಆಗಿದೆ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡು ದಿನಗಳ ಕಾಲ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಗುರುತು ಮರೆಮಾಚಿ ಬದುಕುವವರ ಕತೆಯಾಗಿದೆ. ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೇಯ್‌ಟಿಂಗ್ ಫಾರ್ ಎ ವಿಸಾ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.ಇದರ ಪಠ್ಯ ಆಕರ ಎನ್.ಕೆ.ಹನುಮಂತಯ್ಯ, ಚಂದ್ರಶೇಖರ್ ಕೆ, ರಚನೆ, ವಿನ್ಯಾಸ, ನಿರ್ದೇಶನವನ್ನು ಲಕ್ಷ್ಮಣ್ ಕೆ.ಪಿ. ಮಾಡಿದ್ದಾರೆ ಎಂದರು.
1975 ರ ದಶಕದಲ್ಲಿ ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗ, ಇದು ಹೀಗೆ ಮುಂದೆ ಆಗಲಿರುವ ಪ್ರಯೋಗಗಳ ಸರಣಿಯ ಆರಂಭದ ಬಿಂದು ಪಂಚಮಪದ ನಾಟಕವನ್ನು ಚಂದ್ರಶೇಖರ್ ಕೆ ನಿರ್ದೇಶನ ಮಾಡಿದ್ದು, ಲಕ್ಷ್ಮಣ್ ಕೆ.ಪಿ. ವಿನ್ಯಾಸ ಮಾಡಿದ್ದಾರೆ ಎಂದು ಸಂತೋಷ್ ಹೇಳಿದರು.
ಈ ಎರಡೂ ನಾಟಕಗಳಲ್ಲಿ ದಲಿತಪರ ಅಸ್ಮಿತೆ, ದಲಿತ ಸಂವೇದನೆ, ತಳ ಸಮುದಾಯದ ಸಂವೇದನೆ ಒಳಗೊಂಡಿದೆ.ನಾಟಕ ವೀಕ್ಷಣೆಗೆ ಒಂದು ನಾಟಕಕ್ಕೆ ತಲಾ 100 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ರಂಗಸಂಘಟಕ ಚಲಂ ಹಾಡ್ಲಹಳ್ಳಿ ಮಾತನಾಡಿ ನಾಟಕ ಪರಂಪರೆಯ ಹೊಸ ನಿರೂಪಣೆಯ ಜಂಗಮ ಕಲೆಕ್ಟಿವ್ ತಂಡದ ನಾಟಕಗಳನ್ನು ನೋಡುವುದೇ ಒಂದು ಹಬ್ಬ. ಈ ತಂಡದ ನಾಟಕ ನಿರೂಪಣೆ ಶೈಲಿಯೇ ವಿಭಿನ್ನವಾಗಿರುತ್ತದೆ. ಹಳತು-ಹೊಸತನ್ನು ಬೆಸೆಯುವ ರೀತಿಯೇ ವಿಭಿನ್ನ. ಹಾಗಾಗಿ ನಗರದ ಪ್ರತಿಯೊಬ್ಬರೂ ನಾಟಕ ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಹಾಗೆಯೇ ನಾಳೆ ಸಂಜೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೃಥ್ವಿ ಕೊಣನೂರು ಅವರ ನಿರ್ದೇಶಕದ ಕಿರುಚಿತ್ರ ಹದಿನೇಳೆಂಟು ಪ್ರದರ್ಶನ ಇದ್ದು ಎಲ್ಲರೂ ವೀಕ್ಷಿಸಿ, ಬೆಂಬಲಿಸಿ ಎಂದರು.
ಸುದ್ದಿಗೋಷ್ಟಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಕೆ.ಟಿ.ಶಿವಪ್ರಸಾದ್, ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್, ಅಂಬುಗ ಮಲ್ಲೇಶ್, ಸೋಮಶೇಖರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಇದ್ದರು.