ಚಿತ್ರದುರ್ಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 21 ನೇ ಜಾನುವಾರು ಗಣತಿ ಸೆಪ್ಟೆಂಬರ್ 1 ರಿಂದ ಡಿಸೆಂಬರ್ ಅಂತ್ಯದವರೆಗೆ ದೇಶಾದ್ಯಂತ ನಡೆಯಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಗಣತಿದಾರರು ಪ್ರತಿ ಮನೆ, ಉದ್ಯಮ, ಸಂಸ್ಥೆಗಳಿಗೆ ಭೇಟಿ ನೀಡಿ, ಎಲ್ಲ ತರಹದ ಪ್ರಾಣಿ, ಸಾಕುಪ್ರಾಣಿಗಳು ಹಾಗೂ ಕುಕ್ಕುಟಗಳ ಮಾಹಿತಿ ಸಂಗ್ರಹಿಸಲಿದ್ದಾರೆ. ಬೀದಿ ದನಗಳು ಮತ್ತು ಬೀದಿ ನಾಯಿಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಕುಟುಂಬಸ್ಥರ ಸಾಮಾಜಿಕ ಸ್ಥಿತಿ, ಉದ್ಯೋಗ, ವಿದ್ಯಾರ್ಹತೆ ಮತ್ತು ಕೃಷಿ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ 1049 ಗ್ರಾಮಗಳು, 2,44,160 ಕುಟುಂಬಗಳಿವೆ. 168 ವಾರ್ಡ್‌ಗಳಲ್ಲಿ 74,505 ಕುಟುಂಬಗಳಿದ್ದು ಜಿಲ್ಲೆಯಲ್ಲಿ 3,18,665 ಕುಟುಂಬಗಳಿವೆ. 75 ಎಣಿಕೆದಾರರು ಹಾಗೂ 18 ಮೇಲ್ವಿಚಾರಕರು ಗಣತಿ ಕಾರ‌್ಯದಲ್ಲಿ ಭಾಗವಹಿಸಲಿದ್ದಾರೆ. 2018-19ರ 20 ನೇ ಜಾನುವಾರು ಗಣತಿ ಮಾಹಿತಿಯಂತೆ ಜಿಲ್ಲೆಯಲ್ಲಿ 2,21,608 ದನ,1,13,304 ಎಮ್ಮೆ, 13,52,087 ಕುರಿ, 3,85,058 ಮೇಕೆ, 2,177 ಹಂದಿ, 772 ಮೊಲ, 26,520 ನಾಯಿಗಳು, 55 ಕುದುರೆ, ಇತರೆ 1,740 ಸೇರಿದಂತೆ 21,03,321 ಜಾನುವಾರುಗಳು ಹಾಗೂ 17,40,470 ನಾಟಿಕೋಳಿ,153 ಬಾತುಕೋಳಿ,ಇತರೆ 951 ಸೇರಿ 17,41,574 ಕೋಳಿಗಳ ಸಂಖ್ಯೆ ದಾಖಲಾಗಿತ್ತು.
ಗಣತಿ ಸಂದರ್ಭದಲ್ಲಿ ಜಾನುವಾರು ತಳಿ, ವಯಸ್ಸು ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ. ಗಣತಿ ಮಾಹಿತಿ ಗೌಪ್ಯವಾಗಿರುತ್ತದೆ ಎಂದು ಇಲಾಖೆ ಡಿಡಿ ಡಾ.ಎನ್.ಕುಮಾರ್ ತಿಳಿಸಿದ್ದಾರೆ.