ಜಿಲ್ಲೆ

ಸೆ.1ರಂದು ವಿಜುವಲ್ ವಿಜನ್ ಚಿತ್ರಕಲಾ ಸ್ಪರ್ಧೆ: ಡಾ.ಎಚ್.ಎಲ್ ಮಲ್ಲೇಶಗೌಡ

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆರ್ಟ್ ರೂಟ್ ಸ್ಟುಡಿಯೋ ವತಿಯಿಂದ ಸೆ.1ರಂದು ವಿಜುವಲ್ ವಿಜನ್ ಚಿತ್ರಕಲಾ ಸ್ಪರ್ಧೆ-2024 ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ತಿಳಿಸಿದರು.
ಸೆ.1ರ ಭಾನುವಾರ ಬೆಳಿಗ್ಗೆ 9 ರಿಂದ 12ರವರೆಗೆ ನಗರ ಸಮೀಪದ ಬಿ.ಕಾಟೀಹಳ್ಳಿಯ ಶ್ರೀ ವೀರಾಂಜನೇಯ ದೇವಸ್ಥಾನದ ಹಿಂಭಾಗ ಇರುವ ಆರ್ಟ್ ರೂಟ್ ಸ್ಟುಡಿಯೋದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹವ್ಯಾಸಿ ಕಲಾವಿದರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಥಳದಲ್ಲೇ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು,
ಸ್ಪರ್ಧೆಯಲ್ಲಿ 1 ರಿಂದ 4ನೇ ತರಗತಿ ಮಕ್ಕಳು ತಮಗಿಷ್ಟವಾದ ಚಿತ್ರವನ್ನು ಬಿಡಿಸಬಹುದು,5 ರಿಂದ 7ನೇ ತರಗತಿ ವಿದ್ಯಾರ್ಥಿಗಳು ನಮ್ಮ ಪರಿಸರದ ಕುರಿತಾಗಿ,8ರಿಂದ 10ನೇಯ ಹಾಗೂ ಕಾಲೇಜು ವಿಧ್ಯಾರ್ಥಿಗಳು ನಮ್ಮ ಕಲೆ ಮತ್ತು ಸಂಸ್ಕೃತಿಯ,ಪರಿಸರ ಮತ್ತು ಜೀವನ ವೈವಿಧ್ಯತೆ ಕುರಿತಂತೆ ಹಾಗೂ ಹವ್ಯಾಸಿ ಕಲಾವಿದರು ತಮಗಿಷ್ಟವಾದ ಚಿತ್ರ ಬಿಡಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ಕಲಾವಿದ ಕೆ.ಟಿ ಶಿವಪ್ರಸಾದ್,ನಿರ್ಮಲಾ ಚಿತ್ರಕಲಾ ಶಾಲೆಯ ನಿವೃತ್ತ ಪ್ರಾಂಶುಪಾಲ ಕಾರದ ಕಟ್ಟಿ, ಖ್ಯಾತ ಚಿತ್ರಕಲಾವಿದ ಲಿಂಗದೇವರು, ಕಸಾಪ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತಿ ತರಗತಿವಾರು ಬಹುಮಾನ ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 50ರೂ.ಪ್ರವೇಶಾತಿ ಶುಲ್ಕ ನಿಗದಿ ಪಡಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಗೆ ಅಗತ್ಯವಿರುವ ಡ್ರಾಯಿಂಗ್ ಶೀಟ್ ಅನ್ನು ಆಯೋಜಕರು ನೀಡಲಿದ್ದು,ಉಳಿದ ಪರಿಕರಗಳನ್ನು ಸ್ಪರ್ಧಾಳುಗಳು ತರಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಆರ್ಟ್ ರೂಟ್ ಸ್ಟುಡಿಯೋದ ಮುಖ್ಯಸ್ಥ ಹಾಗೂ ಚಿತ್ರಕಲಾವಿದ ಕೃಷ್ಣಚಾರಿ :9740979430 ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಕೋಶಾಧ್ಯಕ್ಷ ಜಯರಾಂ,ಸಂಘಟನಾ ಕಾರ್ಯದರ್ಶಿ ಆರ್.ಬಿ ಶಂಕರ್,ಹಾಸನ ತಾಲೂಕು ಅಧ್ಯಕ್ಷ ಮಮತೇಶ್, ಚಿತ್ರಕಲಾವಿದ ಕೃಷ್ಣಚಾರಿ ಇದ್ದರು.