ಮೈಸೂರು: ದಸರಾ ಮಹೋತ್ಸವದ ಯುವ ಸಂಭ್ರಮ ಸೆ.16ರಿಂದ ನ.24ರ ವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೆ.16ರಂದು ಸಂಜೆ 5.30ಕ್ಕೆ ಯುವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನಟ ಡಾಲಿ ಧನಂಜಯ ಭಾಗವಹಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯುವ ದಸರಾ ಇಪ ಸಮಿತಿ ವಿಶೇಷಧಿಕಾರಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು 9 ದಿನಗಳ ಕಾಲ ಆಯೋಜಿಸಿರುವ ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿ ಅಲ್ಲದೇ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ 253 ಕಾಲೇಜುಗಳಿಂದ ಸುಮಾರು 10,500 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ನಿತ್ಯ ಸಂಜೆ 6.30ರಿಂದ 10 ಗಂಟೆ ವರೆಗೆ 28 ತಂಡಗಳು ತಲಾ 10 ನಿಮಿಷದಂತೆ ಕಾರ್ಯಕ್ರಮ ನೀಡಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರ ಪ್ರತಿಭೆಗೆ ವೇದಿಕೆ ಕಲ್ಪಿಸಲು ಆಯೋಜಿಸುತ್ತಿರುವ ಯುವ ಸಂಭ್ರಮ ವೇದಿಕೆಯಲ್ಲಿ ವಿಕಲಚೇತನರಿಗೂ ವಿಶೇಷವಾದ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುವುದು. ಜೊತೆಗೆ ವೈದ್ಯರು, ಪೊಲೀಸ್ ಸೇರಿದಂತೆ ಇನ್ನಿತರರಿಂದ ಬಿಡುವಿನ ಮಧ್ಯೆ ಯುವ ಜನರನ್ನು ಜಾಗೃತಿಗೊಳಿಸುವ ಸಣ್ಣ, ಸಣ್ಣ ಕಾರ್ಯಕ್ರಮ ನೀಡಲಾಗುವುದು ಎಂದು ತಿಳಿಸಿದರು.
ಈ ಬಾರಿ ಸ್ವಾತಂತ್ರೃ ಅಮೃತ ಮಹೋತ್ಸವ, ಸ್ವಾತಂತ್ರೃ ಹೊರಾಟಕ್ಕೆ ಕರ್ನಾಟಕದ ಕೊಡುಗೆ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ಸಂಸ್ಕೃತಿ ಮತ್ತು ಜಾನಪದ ಕಲೆ, ಮಹಿಳಾ ಸಬಲೀಕರಣ, ಮಾದರಿ ಮೈಸೂರು ನಿರ್ಮಾಣಕ್ಕೆ ಅರಸರ ಕೊಡುಗೆ ಮತ್ತು ಪರಿಸರ ಸಂರಕ್ಷಣೆ ಈ 9 ಅಂಶಗಳನ್ನು ಒಳಗೊಂಡ ವಿಷಯವ ನೀಡಲಾಗಿದೆ. ಈ ಆಶಯದ ಮೇಲೆ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ ಎಂದು ವಿವರಿಸಿದರು.
ಯುವ ದಸರಾಗೆ 18 ತಂಡ:
ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಪುರಸ್ಕರಿಸಲಾಗುವುದು. ಅಲ್ಲದೇ ಯುವ ದಸರಾ ವೇದಿಕೆಯಲ್ಲಿ 18 ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಕಲಾವಿದರ ಗೌರವಿಸುವುದರ ಜತೆಗೆ ಪ್ರಯಾಣ ಭತ್ಯೆ, ವಸ್ತ್ರ ವಿನ್ಯಾಸದ ಖರ್ಚುವೆಚ್ಚ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಬಯಲು ರಂಗಮಂದಿರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸುವುದಲ್ಲದೇ ಸಿಸಿ ಟಿವಿ ಕ್ಯಾಮರ ಅಳವಡಿಸಲಾಗಿದೆ. ಯುವ ಸಂಭ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು.
ಕರೊನಾದಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಯುವ ದಸರಾವನ್ನು ಈ ಬಾರಿ ಆಕರ್ಷಣೀಯವಾಗಿ ನಡೆಸಲು ಎಲ್ಲ ಸಿದ್ಧತೆ ನಡೆದಿದೆ. ಯಾವ ಕಲಾವಿದರನ್ನು ಆಹ್ವಾನಿಸಬೇಕು ಎನ್ನುವ ಕುರಿತು ಅಂತಿಮ ಪಟ್ಟಿ ಸಿದ್ಧ ಪಡಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶೀಘ್ರವೇ ಮಾಹಿತಿ ನೀಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಯುವ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷರಾದ ಮುಡಾ ಕಾರ್ಯದರ್ಶಿ ಎನ್.ಸಿ.ವೆಂಕಟರಾಜು, ಸಮಿತಿ ಕಾರ್ಯದರ್ಶಿಯಾದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಅಶಾದ್ ರೆಹಮಾನ್ ಷರೀಫ್, ಸಮಿತಿಯ ಡಾ.ಆರ್.ನಿಂಗರಾಜು ಇದ್ದರು.