ಜಿಲ್ಲೆ

ಸೆ.16ರಿಂದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ "ಗಾಂಧಿ ಶಿಲ್ಪ ಬಜಾರ್"

ಮೈಸೂರು: ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಿಂದ ಸೆ.16ರಿಂದ 24ರ ವರೆಗೆ ‘ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
ಹೆಬ್ಬಾಳು ರಿಂಗ್‌ರೋಡ್ ಬಳಿ ಇರುವ ಅರ್ಬನ್ ಹಾತ್‌ನಲ್ಲಿ ಆಯೋಜಿಸಿರುವ ಮೇಳಕ್ಕೆ ಸೆ.16ರಂದು ಸಂಜೆ 4ಕ್ಕೆ ಸಂಸದ ಪ್ರತಾಪಸಿಂಹ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ, ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ಜೆಎಸ್‌ಎಸ್ ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ, ಜವಳಿ ಮಂತ್ರಾಲಯದ ಪ್ರಾಂತೀಯ ನಿರ್ದೇಶಕ ಎಂ.ಪ್ರಭಾಕರನ್ ಇತರರು ಭಾಗವಹಿಸುವರು ಎಂದು ಜೆಎಸ್‌ಎಸ್ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ಟರ‌್ರಾಕೋಟ, ರತ್ನಗಂಬಳಿ, ಹತ್ತಿಜಮಖಾನ, ಅನುಕರಣೆ ಆಭರಣ, ಮರದ ಅಲಗಿನ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಛತ್ತೀಸ್‌ಘಡದ ಧೋಕ್ರಾ, ಎರಕದ ವಸ್ತುಗಳು, ಮೇಘಾಲಯದ ಬಿದಿರಿನ ಕಲೆ, ರಾಜಸ್ತಾನದ ಕರಕುಶಲ ವಸ್ತುಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಆಕರ್ಷಣೆಯಾಗಿವೆ ಎಂದು ವಿವರಿಸಿದರು.
ರಾಜ್ಯ ಅಲ್ಲದೇ ದೇಶದ ವಿವಿಧ ಭಾಗಗಳಿಂದ ಬರುವ 120ಕ್ಕೂ ಹೆಚ್ಚು ಕುಶಲಕರ್ಮಿಗಳು ಗ್ರಾಹಕರ ಅಗತ್ಯ ಹಾಗೂ ಅಭಿರುಚಿ ಅರಿತು ಮಾರುಕಟ್ಟೆಗೆ ಬೇಕಾದ ವಿನ್ಯಾಸ ವಸ್ತುಗಳನ್ನು ರೂಪಿಸಿ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ. ಕುಶಲಕರ್ಮಿಗಳು ಹಾಗೂ ಗ್ರಾಹಕರಿಗೆ ನೇರವಾಗಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ನಗರದ ಜನತೆ ಹಾಗೂ ಪ್ರವಾಸಿಗರು ಪ್ರಯೋಜನ ಪಡೆಯಬೇಕೆಂದು ಪಡೆಯಬೇಕೆಂದು ಮನವಿ ಮಾಡಿದರು.
ಜೆಎಸ್‌ಎಸ್ ಅರ್ಬನ್ ಹಾತ್ ‘ಎ’ ಗ್ರೇಡ್:
ಕೇಂದ್ರ ಜವಳಿ ಇಲಾಖೆಯ ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನೀಲ್‌ಕುಮಾರ್ ಮಾತನಾಡಿ, ದೇಶದಲ್ಲಿರುವ 37 ಕರಕುಶಲ ಸೇವಾ ಕೇಂದ್ರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ನಡೆಯುತ್ತಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್ ದೇಶದಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದೆ ಎಂದು ಹೇಳಿದರು.
ದೇಶದ ಎಲ್ಲೆಡೆ ಸರ್ಕಾರದಿಂದಲೇ ಸೇವಾ ಕೇಂದ್ರ ನಡೆಯುತ್ತಿದ್ದು, ಮೈಸೂರಿನ ಕೇಂದ್ರ ಮಾತ್ರ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಾಲ್ಕು ವಸ್ತು ಪ್ರದರ್ಶನ, ವ್ಯಾಪಕ ಪ್ರಚಾರ ಇಡೀ ದೇಶದ ಗಮನ ಸೆಳೆದಿದ್ದು, ಪ್ರಥಮ ದರ್ಜೆ ಸ್ಥಾನ ಪಡೆದಿರುವುದು ಮೈಸೂರಿನ ಹೆಮ್ಮೆಯ ಸಂಗತಿ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ಮಾತನಾಡಿ, ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ವೈವಿಧ್ಯಮಯ ವಸ್ತು ಪ್ರದರ್ಶನ ಆಯೋಜಿಸಿಕೊಂಡು ಬರುತ್ತಿದ್ದು, ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ಗಾಗಿಯೇ ಹಲವು ಗ್ರಾಹಕರು ಕಾಯುತ್ತಿದ್ದಾರೆ. ಉತ್ಪಾದಕರಿಗೂ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ, ಪ್ರಯಣ ಭತ್ಯ, ಉಚಿತ ಮಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕರಕುಶಲ ಕಲೆ ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದು ತಿಳಿಸಿದರು.