ಜಿಲ್ಲೆ

ಸೆ. 15 ರಂದು ಬೃಹತ್ ಮಾನವ ಸರಪಳಿ

ಬಳ್ಳಾರಿ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಬೀದರ್‌ನಿಂದ ಚಾಮರಾಜನಗರ ವರೆಗೆ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲೂ 45.9ಕಿ.ಮೀ. ನಷ್ಟು ಮಾನವ ಸರಪಳಿ ನಿರ್ಮಿಸಿ, ಯಶಸ್ವಿಗೊಳಿಸಬೇಕು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪ್ರಜಾ ಪ್ರಭುತ್ವದ ಮೌಲ್ಯ, ಸಂವಿಧಾನದ ಆಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರವು ಬೃಹತ್ ಮಾನವ ಸರಪಳಿ ಆಯೊಜನೆ ಹಮ್ಮಿಕೊಂಡಿದ್ದು, ಸಂವಿಧಾನದ ಗೌರವ, ಘನತೆ ಹೆಚ್ಚಿಸುವ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುವಂತಹ ಮಾನವ ಸರಪಳಿ ರಚಿಸಿ ಯಶಸ್ವಿಯಾಗಿ, ಯಾವುದೇ ಲೋಪ ಆಗದಂತೆ ಅವಶ್ಯಕ ಕ್ರಮವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ತೆರಳಲು ಸಾರಿಗೆ ವ್ಯವಸ್ಥೆ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಆರೋಗ್ಯ ಸುವ್ಯವಸ್ಥೆ ಮತ್ತು ಉಪಹಾರ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದ್ದು, ಪ್ರತಿ 1 ಕಿ.ಮೀ. ವ್ಯಾಪ್ತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದರು.
ಸಂವಿಧಾನ ಸರಪಳಿ ಆಯೋಜನೆಯು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ವಿವಿಧ ಸಾಂಸ್ಕೃತಿಕ, ಕಲಾ ತಂಡಗಳ, ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಹೇಳಿದರು.
ಸ್ಥಳೀಯ ಮಟ್ಟದ ಗ್ರಾ.ಪಂ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಘ -ಸಂಘಟನೆಗಳು ಸಕ್ರೀಯವಾಗಿ ಪಾಲ್ಗೊಂಡು, ಸಂತೋಷ ಸಡಗರದಿಂದ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ಬೃಹತ್ ಮಾನವ ಸರಪಳಿ ಆಯೋಜನೆಯು ಸಮಾನತೆ, ಸಾಮರಸ್ಯ, ಒಮ್ಮತ ಪ್ರದರ್ಶಿಸುವ ಕಾರ್ಯಕ್ರಮವಾಗಿದ್ದು, ಎಲ್ಲರೂ ಉತ್ಸುಕತೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ರೂಟ್ ಮ್ಯಾಪ್ ಗಳು :
ಬೃಹತ್ ಮಾನವ ಸರಪಳಿಯು ವಿಜಯನಗರ ಜಿಲ್ಲೆಯ ಗಾದಿಗನೂರಿನಿಂದ ಆಗಮಿಸಿ ಸಂಡೂರು ತಾಲ್ಲೂಕಿನ ಕುರೇಕುಪ್ಪ, ಎಸ್.ಬಸಾಪುರ, ವಡ್ಡು, ಬನ್ನಿಹಟ್ಟಿ, ಲಿಂಗದಹಳ್ಳಿ, ಉಬ್ಬಲಗಂಡಿ, ಯು.ರಾಜಾಪುರ. ಯು.ಮಲ್ಲಾಪುರ ಗ್ರಾಮಗಳು ಸೇರಿದಂತೆ ಒಟ್ಟು 45.9 ಕಿ.ಮಿ ಮಾನವ ಸರಪಳಿ ಪ್ರದರ್ಶಿಸಿ ಚಿತ್ರದುರ್ಗ ಜಿಲ್ಲೆಯ ಗಡಿ ಗ್ರಾಮವಾದ ಕೆಳಗಿನ ಕಣಿವೆ ಗ್ರಾಮಕ್ಕೆ ತಲುಪುತ್ತದೆ.
ಸೆ.15 ರಂದು ಬೆಳಿಗ್ಗೆ 08 ಗಂಟೆಯಿಂದ 09.30 ಗಂಟೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲು ಸರ್ಕಾರವು ವಿನೂತನ ಪ್ರಯೋಗ ಹಮ್ಮಿಕೊಂಡಿದೆ.