ಹಾಸನ: ಸೆ.14ರಂದು ರಾಷ್ಟ್ರೀಯ ಮೆಗಾ ಲೋಕ್ ಅದಾಲತ್‌ನಲ್ಲಿ ರಾಜಿ ಪ್ರಕ್ರಿಯೆಯ ಮೂಲಕ ಶೀಘ್ರವಾಗಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಉಷಾರಾಣಿ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಸೆ.14ರಂದು ರಾಷ್ಟ್ರೀಯ ಮೆಗಾ ಲೋಕ್ ಅದಾಲತ್‌ನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಆಯೋಜಿಸಿದ್ದು ಸದರಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ಬಗೆಹರಿಸಬಹುದಾದ ಸಿವಿಲ್, ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅದೇ ರೀತಿ ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಾತಿ , ಮೋಟಾರು ವಾಹನ ಪರಿಹಾರ , ಕೌಟುಂಬಿಕ ಪ್ರಕರಣಗಳು, ಭೂಸ್ವಾಧೀನ , ಕಂದಾಯ , ಜನನ ನೋಂದಣಿ , ಜೀವನಾಂಶ, ಸೇರಿದಂತೆ ಇನ್ನಿತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು, ನೀರಿನ ಕರ ವಸೂಲಿ, ಆಸ್ತಿತೆರಿಗೆ ಪ್ರಕರಣಗಳನ್ನು, ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಸಂಬಂಧಪಟ್ಟ ಪಕ್ಷದಾರರುದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಇದರಿಂದ ಸಮಯದ ಉಳಿತಾಯ, ಶೀಘ್ರ ನ್ಯಾಯದಾನ, ಸೌಹಾರ್ದಿತ ಬಾಂಧವ್ಯ ವೃದ್ಧಿಸಲಿದ್ದು ಅದರ ಸದುಪಯೋಗವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ. ತಾಲೂಕು ಮಟ್ಟದಲ್ಲಿ ತಾಲೂಕು ನ್ಯಾಯಾಲಯ ಆವರಣದಲ್ಲಿನ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ ಉಪಸ್ಥಿತರಿದ್ದರು.