ಚಿತ್ರದುರ್ಗ: ಪ್ರತಿ ವರ್ಷ ಸೆ. 14 ರಂದು ಅಂತಾರಾಷ್ಟ್ರೀಯ ಹಿಂದಿ ದಿವಸ್ ಬದಲು ಕೇಂದ್ರ ಸರ್ಕಾರ ಕನ್ನಡ ಭಾಷಾ ದಿನವನ್ನಾಗಿ ಆಚರಿಸಬೇಕು ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಹಿಂದಿ ದಿವಸ್ ಆಚರಣೆ ಖಂಡಿಸಿ, ಆ ಭಾಷೆಯ ಪೋಸ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಯಾವ ಕಾರಣಕ್ಕೂ ಬಲವಂತದ ಹೇರಿಕೆಗೆ ಮುಂದಾಗಬಾರದು ಎಂದು ಒತ್ತಾಯಿಸಿ ಅಂಚೆ ಮೂಲಕ ಹತ್ತಾರು ಪತ್ರಗಳನ್ನು ರವಾನಿಸಿದರು.
ಕನ್ನಡಕ್ಕೆ 2,500ಕ್ಕೂ ಅಧಿಕ ವರ್ಷಗಳ ಸುದೀರ್ಘ ಇತಿಹಾಸವಿದ್ದರೂ ಕೇಂದ್ರ ಸರ್ಕಾರ ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳ ಇತಿಹಾಸದಲ್ಲೇ ಅತ್ಯಂತ ಹಳೆಯದಾದ ಕನ್ನಡಕ್ಕೆ ವಿಶ್ವ ಭಾಷೆಯ ಸ್ಥಾನಮಾನ ನೀಡಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ಅವರು ಕ್ರಮವಹಿಸಬೇಕು ಎಂದು ಕೋರಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಗೋಪಿನಾಥ್, ರತ್ನಮ್ಮ, ಸಿ.ಜಗದೀಶ್, ಮುಜಾಯಿದ್, ಅವಿನಾಶ್, ನಾಗೇಶ್, ಯರ‌್ರಿಸ್ವಾಮಿ, ಕಮಲಾ, ನಾಗರಾಜ್ ಮುತ್ತು, ಹರೀಶ್‌ಕುಮಾರ್, ಪಿ.ಆರ್.ಮಧುಸೂದನ್, ಪಾಂಡು, ಅಖಿಲೇಶ್ ಇತರರಿದ್ದರು.