ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ಬ್ರಹ್ಮಲೀನ ರಾಮಾನಂದ ಮಹಾಸ್ವಾಮಿಗಳ ಆಶ್ರಮದಲ್ಲಿ ರಾಮಾನಂದ ಮಹಾಸ್ವಾಮಿಗಳ 75ನೇ ಪುಣ್ಯರಾಧನೆ ಹಾಗೂ ಮಠದ ಪೀಠಾಧ್ಯಕ್ಷ ಸ್ವರೂಪಾನಂದ ಸ್ವಾಮೀಜಿಯವರ ಪೀಠಾರೋಹಣದ ರಜತ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ ಸೆ.13ರಿಂದ 20ರವರೆಗೆ ಜರುಗಲಿದೆ ಎಂದು ಕಗಲಗೊಂಬ ಗ್ರಾಮದ ಮುಖಂಡ ವೀರುಪಾಕ್ಷ ಹಾದಿಮನಿ ಹೇಳಿದರು.
ನವನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಸಿದ್ಧರೂಢ ಸ್ವಾಮೀಜಿ, ಪಾವನ ಸಾನ್ನಿಧ್ಯವನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಹಿಸಿಕೊಳ್ಳಲಿದ್ದಾರೆ. ಇಂಚಲ ಸಾದು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಬೀದರದ ಡಾ.ಶಿವಕುಮಾರ ಸ್ವಾಮೀಜಿ, ಶಿವಯೋಗಿ ಸಂಸ್ಥಾನಮಠದ ಪ್ರಣವಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಕಾಡರಕೊಪ್ಪದ ಪೂರ್ಣಾನಂದ ಆಶ್ರಮದ ದಯಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸೆ.13 ರಂದು ಬೆಳಗ್ಗೆ 9 ರಿಂದ 12ರವರೆಗೆ ಗುರುಪಾದ ಸೇವೆ, ಸಂಜೆ 5 ರಿಂದ 8ರ ವರೆಗೆ ಶರಣರ ಸಂಘ ಕುರಿತು ಪ್ರವಚನ ನಡೆಯಲಿದೆ. ರಾತ್ರಿ 8 ಗಂಟೆಗೆ ಆರ್.ಕೆ.ಬಡಿಗೇರ ಅವರಿಂದ ರಕ್ತ ರಾತ್ರಿ ಮತ್ತು ಅದ್ಭುತ ರಾಮಾಯಣ ನಾಟಕದ ಸನ್ನಿವೇಶಗಳ ಪ್ರದರ್ಶನ ನಡೆಯಲಿದೆ. 9 ಗಂಟೆಗೆ ಜಾನಪದ , ತತ್ವಪದ, ಲಾವಣಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಸೆ.14ರಂದು ಹರಪೂಜೆ, ಕರುಣ, ಸೆ.15ರಂದು ವಿನಯ, ನಿಜ ಸಮಯ ನಿಷ್ಠೆ ಕುರಿತು ಪ್ರವಚನ ನಡೆಯಲಿದೆ. ರಾತ್ರಿ 9ಕ್ಕೆ ಡೊಳ್ಳಿನ ಕಾರ್ಯಕ್ರಮ ನಡೆಯಲಿದೆ. ಸೆ.16ರಂದು ವಿರತಿ, ವಿವೇಕ ಕುರಿತು ಬೆಳಗ್ಗೆಯಿಂದ ಪ್ರವಚನ, ರಾತ್ರಿ 8 ಕ್ಕೆ ಗಂಗಾವತಿ ಪ್ರಾಣೇಶ ಹಾಗೂ ತಂಡದವರಿಂದ ಹಾಸ್ಯ ಸಂಜೆ ನಡೆಯಲಿದೆ ಎಂದರು.
ಸೆ.19 ರಂದು ಧರ್ಮ, ಗುರು ಸ್ಥಿತ ಪ್ರಜ್ಞೆ ರಾಮಾನಂದರು ಕುರಿತು ಪ್ರವಚನ ನಡೆಯಲಿದೆ. ರಾತ್ರಿ 10.30ಕ್ಕೆ ಸ್ವರೂಪಾನಂದ ಸ್ವಾಮೀಜಿಯವರ ಕಿರೀಟ ಪೂಜಾ ಕಾರ್ಯಕ್ರಮ ನಡೆಯಲಿದೆ. ಸೆ.20ರಂದು ಬೆಳ್ಳಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಕಗಲಗೊಂಬ ಗ್ರಾಮದ ಬ್ರಹ್ಮಲೀನ ರಾಮಾನಂದ ಮಹಾಸ್ವಾಮಿಗಳ ಆಶ್ರಮದ ಪೀಠಾಧ್ಯಕ್ಷ ಸ್ವರೂಪಾನಂದ ಸ್ವಾಮೀಜಿ, ರಾಮಚಂದ್ರ ಯಡಹಳ್ಳಿ, ಭೀಮನಗೌಡ ದಂಡನ್ನವರ, ಶ್ರೀನಿವಾಸ ಕಲಾದಗಿ, ರಮೇಶ ಹಲಗತ್ತಿ ಇದ್ದರು.