ಹಾಸನ: ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ ಮತ್ತು ರಾಯಲ್ ಅಪೊಲೋ ಶಾಲೆಯ ಸಹಭಾಗಿತ್ವದೊಂದಿಗೆ 15 ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ನಗರದ ರಾಯಲ್ ಅಪೊಲೋ ಶಾಲೆ ಆವರಣದಲ್ಲಿ ಸೆ.13 ರಿಂದ 15 ರ ವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್ ಹೇಳಿದರು.
ಸದರಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300-350 ಮಂದಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಮಕ್ಕಳಲ್ಲಿನ ಚೆಸ್ ಪ್ರತಿಭೆ ಹೊರತರಲು ಮತ್ತು ಆಸಕ್ತಿ ಮೂಡಿಸಲು ನಿರಂತರವಾಗಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಂದರು.
ಕಾರ್ಯದರ್ಶಿ ಹಾಗೂ ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ತ್ಯಾಗರಾಜ್ ಎಂ.ಟಿ.ಮಾತನಾಡಿ, ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರತ್ಯೇಕವಾಗಿ 9 ಸುತ್ತು ನಡೆಯಲಿವೆ.ಅದರಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ಬಾಲಕ ಮತ್ತು ಬಾಲಕಿಯರು, ಬರುವ ನವೆಂಬರ್ 3 ರಿಂದ 11 ರ ವರೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.
ಈ ಅವಕಾಶವನ್ನು ಚೆಸ್ ಆಡುವ ಕಿಶೋರ ಪ್ರತಿಭೆಗಳು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರತಿ ಆಟಗಾರರಿಗೆ ತಲಾ 900 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಊಟ-ವಸತಿ ಖರ್ಚನ್ನು ಅವರೇ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9901230763/8970197056 ಈ ನಂಬರನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ರಾಧ ಜಗದೀಶ್,ಕಾವ್ಯ ಚಂದನ್, ನಯನ ಸತೀಶ್ ಇದ್ದರು.