ಹಾಸನ: ಸಕಲೇಶಪುರ ತಾಲೂಕಿನ ಕೆ.ಹೊಸಕೋಟೆಯವರಾದ ನಟ ರೋಹಿತ್ ನಾಗೇಶ್ ಹಾಗೂ ಸ್ವಾತಿ ನಟಿಸಿರುವ ವಿಕಾಸಪರ್ವ ಚಿತ್ರ ಇದೇ ತಿಂಗಳ ಸೆ.13 ರಂದು ರಾಜ್ಯಾದ್ಯಂತ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ನಮ್ಮೂರ ನಾಯಕನ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡುವ ಉತ್ತೇಜನ ನೀಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಕೆ.ಹೊಸಕೋಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ ಹರೀಶ್ ತಿಳಿಸಿದರು.
ಜಿಲ್ಲೆಯಲ್ಲಿ ನಗರದ ಪಿಕ್ಚರ್ ಪ್ಯಾಲೆಸ್ ಹಾಗೂ ಸಕಲೇಶಪುರದ ತೇಜಸ್ವಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ರೋಹಿತ್ ನಾಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ 22 ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಅನೇಕ ಧಾರವಾಹಿಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ರೋಹಿತ್ ನಾಗೇಶ್ ಅವರು, ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ವಿಕಾಸಪರ್ವ ಸಿನಿಮಾ ರಾಜ್ಯದೆಲ್ಲೆಡೆ ಪ್ರದರ್ಶನಗೊಳ್ಳಲಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉತ್ತಮ ಸಂದೇಶ ಅಳವಡಿಸಿ ನಿರ್ಮಿಸಿರುವ ವಿಕಾಸಪರ್ವ ಸಿನಿಮಾವನ್ನು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ನಾಯಕ ನಟ ರೋಹಿತ್ ನಾಗೇಶ್ ಮಾತನಾಡಿ, ವಿಕಾಸಪರ್ವ ಸಿನಿಮಾ ತುಂಬಾ ಸೂಕ್ಷ ವಿಷಯ ಆಧಾರಿತ ಸಿನಿಮಾವಾಗಿದೆ. ಸಿನಿಮಾ ನೋಡಿದವರು ಇದು ನನ್ನ ಜೀವನದ ಕಥೆ, ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಬರುತ್ತಿದೆ ಎಂದು ಭಾವಿಸುತ್ತಾರೆ. ಸಿನಿಮಾದಲ್ಲಿ ಎಲ್ಲಿಯೂ ಅಬ್ಬರ ಇಲ್ಲ, ಮೂರು ಹಾಡುಗಳು, ಎರಡು ಫೈಟ್ ಸನ್ನಿವೇಶ ಇವೆ ಎಂದರು.
ಸಕಲೇಶಪುರ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಛಾಯಾಗ್ರಾಹಕರು ಅತ್ಯುತ್ತಮವಾಗಿ ಸೆರೆ ಹಿಡಿದ್ದಾರೆ. ಸಿನಿಮಾ ತುಂಬಾ ಒಳ್ಳೆಯ ವಿಷಯ ಆಧಾರಿತ ಸಿನಿಮಾ, ಜನರು ನೋಡಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನವೀನ್ ಸುವರ್ಣ ಕ್ಯಾಮರಾ ವರ್ಕ್ ನಿರ್ವಹಿಸಿದ್ದಾರೆ. ವಿಶೃತ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರಕ್ಕೆ ಅನ್ಬು ಅರಸ್ ಆ್ಯಕ್ಷನ್‌ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳೂ ಇವೆ. ಸಮಾಜದ ಪ್ರತಿಯೊಂದು ಮನೆಯಲ್ಲೂ ನಡೆಯುವ ಸಮಸ್ಯೆಯೊಂದನ್ನು ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಅದೇನೆಂದು ನೀವು ಚಿತ್ರಮಂದಿರದಲ್ಲೇ ನೋಡಬೇಕು ಎಂದರು. ನನಗೆ ನನ್ನ ತವರು ಜಿಲ್ಲೆ ಹಾಸನದಲ್ಲಿ ನನ್ನ ಚಿತ್ರ ಹೆಚ್ಚು ದಿನ ಓಡಬೇಕು ಎಂಬ ಆಸೆಯಿದೆ ಎಂದರು.
ನಾಯಕಿ ನಟಿ ಸ್ವಾತಿ ಮಾತನಾಡಿ, ಚಿತ್ರದಲ್ಲಿ ನಾನು ಗೃಹಿಣಿ ಪಾತ್ರ ನಿರ್ವಹಿಸಿದ್ದು, ಮಹಿಳೆ ಸಂಸಾರದಲ್ಲಿ ಹೇಗೆಲ್ಲ ಇರಬೇಕು ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಕುಟುಂಬ ಸಮೇತರಾಗಿ ನೋಡಲೇಬೇಕಾದ ಸಿನಿಮಾ ಇದು, ಜಿಲ್ಲೆಯ ಜನರು ಸಿನಿಮಾ ಮಂದಿರಕ್ಕೆ ಹೋಗಿ ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಕಲೇಶಪುರದ ರಾಜೇಶ್‌ಗೌಡ, ರೊ.ಮೋಹನ್, ಹರೀಶ್, ಸಾಮಾಜಿಕ ಹೋರಾಟಗಾರ್ತಿ ರತಿ ಇದ್ದರು.