ಚಾಮರಾಜನಗರ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆ.13 ರಂದು ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಮನವಿ ಮಾಡಿದರು.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲದ ಒಟ್ಟು 14 ನ್ಯಾಯಾಲಯಗಳಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ಲೋಕ್ ಅದಾಲತ್ ನಡೆಯಲಿದೆ. ಈ ಬಾರಿ ಅದಾಲತ್‌ನಲ್ಲಿ 1 ಲಕ್ಷ ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿಹೊಂದಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಸೋಮರಾವ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಪ್ರಕರಣಗಳು, ಗ್ರಾಹಕರ ವೇದಿಕೆ ಪ್ರಕರಣಗಳು, ರಿಯಲ್ ಎಸ್ಟೇಟ್ ಪ್ರಕರಣಗಳು, ಸಾಲ ವಸೂಲಾತಿ, ಚೆಕ್ ಅಮಾನ್ಯ, ಮೋಟಾರ್ ಅಪಘಾತ ಪರಿಹಾರ, ವಿದ್ಯುತ್ ಮತ್ತು ನೀರಿನ ಶುಲ್ಕ, ಕಾರ್ಮಿಕ ವಿವಾದಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಭತ್ಯೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಇನ್ನಿತರೆ ರಾಜಿಯೋಗ್ಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್, ಸಿ.ಡಿ.ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಹಾಜರಿದ್ದರು.
ಶೇ.50 ರಷ್ಟು ದಂಡ ಪಾವತಿಸಿ:
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಅನ್ವಯವಾಗುವಂತೆ ಬಾಕಿ ಪ್ರಕರಣದ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ಸರ್ಕಾರ ಆದೇಶಿಸಿದ್ದು, ಸೆ.12 ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಶೇ.50 ರಷ್ಟು ದಂಡ ಪಾವತಿಸುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ರಾಷ್ಟ್ರಕ್ಕಾಗಿ 90 ದಿನ ಮಧ್ಯಸ್ಥಿಕೆ ಅಭಿಯಾನದಲ್ಲಿ 409 ಪ್ರಕರಣಗಳ ಇತ್ಯರ್ಥಪಡಿಸುವ ಗುರಿಹೊಂದಲಾಗಿದ್ದು, ಅದರಲ್ಲಿ ಪ್ರಸ್ತುತ 28 ಪ್ರಕರಣಗಳಲ್ಲಿ ರಾಜೀಮಾಡಲಾಗಿದೆ. ಅ.7 ರವರೆಗೂ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದರು.