ವಿಜಯವಾಣಿ ಸುದ್ದಿಜಾಲ ಗದಗ
ಜನರು ಸದಾ ಸೃಜನಶೀಲರಾಗಿರಲು ಶ್ರಾವಣ ಮಾಸ ಪೂರಕ ಮತ್ತು ಪ್ರೇರಕವಾಗಿದೆ ಎಂದು ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ಹೇಳಿದರು.
ನಗರದ ಬಸವಪ್ರಭೆ ಕ್ಯಾಂಪಸ್ದಲ್ಲಿ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಪ್ತಾಹಿಕ ವಚನ ಶ್ರಾವಣ-2022 ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಶ್ರಾವಣ ಮಾಸ ಬಂದರೆ ಮಠ-ಮಂದಿರ, ಸಂಘ-ಸಂಸ್ಥೆಗಳಲ್ಲಿ ಪುರಾಣ-ಪ್ರವಚನ, ಉಪನ್ಯಾಸಗಳನ್ನು ಆಯೋಜಿಸಿ ಜನತೆಗೆ ಒಳಿತು ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಶ್ರಾವಣದಲ್ಲಿ ಪುರಾಣ, ಪ್ರವಚನ, ಪುಣ್ಯ ಕತೆಗಳನ್ನು ಕೇಳುವವರು ಜೀವನದಲ್ಲಿ ಕಾಲು ಭಾಗವಾದರೂ ಆಚರಿಸಲು ಮುಂದಾಗುತ್ತಾರೆ. ಹೀಗಾಗಿ ಅವರಲ್ಲಿ ಮನಪರಿವರ್ತನೆಯಾಗಿ ಒಳ್ಳೆಯ ಗುಣ, ಸ್ವಭಾವಗಳನ್ನು ಹೊಂದುತ್ತಾರೆ. ಇಂದು ನಾವು ಕೇವಲ ಹಣ ಸಂಪಾದನೆಯಲ್ಲಿ ಮಗ್ನರಾಗಿ ನಮ್ಮಲ್ಲಿರುವ ಸೃಜನಶೀಲತೆಯನ್ನು ಮರೆತಿದ್ದೇವೆ ಎಂದರು.
ಪ್ರಾಚಾರ್ಯ ಕೆ. ಎಚ್. ಬೇಲೂರ, ಮಹಾತ್ಮರ, ಶಿವಶರಣರ ವಚನಗಳನ್ನು ಹೇಳುವುದರಿಂದ, ಕೇಳುವುದರಿಂದ ನಮ್ಮಲ್ಲಿ ದುರ್ಗಣ, ದುರಾಚಾರಗಳು ದೂರಾಗಿ ಒಳ್ಳೆಯವರಾಗುತ್ತೇವೆ. ಇದರಿಂದ ಉತ್ತಮ ಸಮಾಜ ನಿರ್ವಣಗೊಂಡು ದೇಶ ಪ್ರಗತಿ ಹೊಂದಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಎಸ್.ಆರ್. ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕ ವಿ.ಬಿ.ತಾಳಿ ಮಾತನಾಡಿದರು. ಬಸವ ಯೋಗ ಕೇಂದ್ರದ ಡಾ. ಎಸ್. ಕೆ. ನಾಲತ್ವಾಡಮಠ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕೋಶಾಧ್ಯಕ್ಷೆ ಜಯಶ್ರೀ ದಾವಣಗೇರಿ, ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪಲ್ಲೇದ, ಡಾ. ಈರಣ್ಣ ಕೊರಚಗಾಂವ, ಮಹಾಂತ ಕಟ್ಟಿಮನಿ, ಹರ್ಷದ ಜೋಶಿ, ಶಶಿಕಲಾ ಬೆಲ್ಲದ, ಸಂಗೀತಾ ಮಡಿವಾಳರ, ವೀಣಾ ಹಿರೇಮಠ ಇತರರಿದ್ದರು.
ವಕೀಲ ಕೊಟ್ರೇಶ ದಾವಣಗೇರಿ, ಬಸವಭಕ್ತ ಅಂದಾನಪ್ಪ ಕೆಂಭಾವಿ ಹಾಗೂ ಅನ್ನಪೂರ್ಣ ಅಸೂಟಿ ದಾಸೋಹ ಸೇವೆ ನೆರವೇರಿಸಿದರು. ಗೌರಿ ಜಿರಂಕಳಿ ಸಾಮೂಹಿಕ ಬಸವ ಪ್ರಾರ್ಥನೆ ಹೇಳಿದರು. ವಿ.ಎಂ. ಮುಂದಿನಮನಿ ಸ್ವಾಗತಿಸಿದರು. ಡಾ. ಎಂ.ವಿ. ಐಹೊಳ್ಳಿ ವಂದಿಸಿದರು. ಚೇತನ ಚುಂತಾ ನಿರೂಪಿಸಿದರು.