ಜಿಲ್ಲೆ

ಸೃಜನಶೀಲ ಚಿಂತನೆಯಿಂದ ಬದಲಾವಣೆ ಸಾಧ್ಯ

ಕಲಬುರಗಿ: ಕಲಾವಿದರ ದೂರದೃಷ್ಟಿ ಚಿಂತನೆ ಮತ್ತು ಸೃಜನಶೀಲ ಆಲೋಚನೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಸ್ವಸಾಮರ್ಥ್ಯ ಮತ್ತು ಕ್ರಿಯಾಶೀಲತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಕಲಾವಿದನಾಗಿ ಹೊರಹೊಮ್ಮಬಹುದು. ಈ ನಿಟ್ಟಿನಲ್ಲಿ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ್ ಕಿವಿಮಾತು ಹೇಳಿದರು.

ವಿವಿಯ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಸಂಸ್ಥೆ ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಬಾಬೂಜಿ ಸಂದೇಶ ಆಧಾರಿತ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಷ್ಟç ಮತ್ತು ರಾಜ್ಯಮಟ್ಟದ ಕಲಾವಿದರ ಕೈಚಳಕದಿಂದ ಬಾಬೂಜಿ ಚಿಂತನೆ, ಸುಧಾರಣೆಗಳು ಚಿತ್ರಕಲೆಗಳಲ್ಲಿ ಮನೋಜ್ಞವಾಗಿ ಬಿತ್ತರಗೊಂಡಿವೆ. ಈ ಶಿಬಿರದಿಂದ ಯುವ ಕಲಾವಿದರಿಗೆ ಅತ್ಯುತ್ತಮ ಅನುಭವ, ಮಾರ್ಗದರ್ಶನ ದೊರೆತಿದೆ. ಕಲ್ಯಾಣ ಕರ್ನಾಟಕದ ಅನೇಕ ಕಲಾವಿದರು ರಾಷ್ಟç ಮಟ್ಟದಲ್ಲಿ ಹೆಸರು ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಡಾ.ಬಾಬು ಜಗಜೀವನರಾಮ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಕೆ.ಲಿಂಗಪ್ಪ ಸ್ವಾಗತಿಸಿ, ಶಿಬಿರದಲ್ಲಿ ರಾಷ್ಟç, ರಾಜ್ಯ ಪ್ರಶಸ್ತಿ ಪಡೆದ ಕಲಾವಿದರು ಬಿಡಿಸಿರುವ ಚಿತ್ರಗಳು ದಾಖಲೆಗಳಾಗಿವೆ. ಇಂತಹ ಅಪರೂಪದ ದೃಶ್ಯಕಲೆಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಆಸಕ್ತಿದಾಯಕವಾಗಿವೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಮುಖರಾದ ಬಸವರಾಜು ಜಾನೆ, ವಿ.ವಿ. ಬಿರಾದಾರ, ದಾನಯ್ಯ ಚೌಕಿಮಠ, ಡಾ.ಕೆ.ಎಂ. ಕುಮಾರಸ್ವಾಮಿ, ಗುರು ಚವ್ಹಾಣ್, ಶರಣು ನಾವಿ, ಸಂಗಮೇಶ ಚಿಲ್ಲಶೆಟ್ಟಿ, ನಿಂಗನಗೌಡ ಪಾಟೀಲ್ ಇದ್ದರು. ಶಿಬಿರ ಸಂಚಾಲಕ ಡಾ.ಪಿ.ಪರಶುರಾಮ ನಿರೂಪಣೆ ಮಾಡಿದರು. ಡಾ.ಮಲ್ಲಿಕಾರ್ಜುನ ಬಾಗೋಡಿ ವಂದಿಸಿದರು.

ಶಿಬಿರಾರ್ಥಿಗಳಿಗೆ ಕುಲಪತಿ ಪ್ರೊ.ಅಗಸರ್ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ತುಮಕೂರಿನ ಕಲಾವಿದ ಪ್ರಭು ಹರಸೂರು ಹಾಗೂ ಬಳ್ಳಾರಿ ಚಿತ್ರ ಕಲಾವಿದ ಕಾಶೀನಾಥ ಕಾಳೆ ಅನಿಸಿಕೆ ಹಂಚಿಕೊAಡರು.