ಜಿಲ್ಲೆ

ಸೂಳೆಕೆರೆಯಲ್ಲಿ ಮತದಾನ ಜಾಗೃತಿ, ತೇಲಿದ ಥರ್ಮಾಕೋಲ್ ಪೆಟ್ಟಿಗೆ ಮಾದರಿ

reporterctd

ದಾವಣಗೆರೆ: ಸಂವಿಧಾನ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದೆ. ಇದನ್ನು ಚಲಾಯಿಸುವ ಜವಾಬ್ದಾರಿ ನಿಭಾಯಿಸದೆ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಇಟ್ನಾಳ್ ಹೇಳಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮತದಾನ ಜವಾಬ್ದಾರಿಯಿಂದ ನುಣುಚಿಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯಬಹುದು ಎಂದರು.

ಕಳೆದ ಚುನಾವಣೆಯಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.91ರಷ್ಟು ಮತದಾನ ಪ್ರಮಾಣ ದಾಖಲಾಗಿದೆ. ಈ ಬಾರಿ ಶೇ.90ರಷ್ಟು ಮತದಾನದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಜ್ಞಾವಂತರಾಗಿ ವೋಟಿಂಗ್ ಮಾಡಬೇಕು ಎಂದು ತಿಳಿಸಿದರು.

ಮತದಾನ ಜಾಗೃತಿ ಹಾಗೂ ಸಿ-ವಿಜಿಲ್ ಆ್ಯಪ್ ಇನ್ನಿತರೆ ಮಾಹಿತಿಗಳುಳ್ಳ, ಥರ್ಮಾಕೋಲ್‌ನಲ್ಲಿ ರಚಿಸಲಾದ, ಸುಮಾರು 3-5 ಅಡಿ ಸುತ್ತಳತೆಯ ಚೌಕಾಕೃತಿಯ ಪೆಟ್ಟಿಗೆಯನ್ನು ಕೆರೆಯಲ್ಲಿ ತೇಲಿ ಬಿಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಬೋಟಿಂಗ್ ಮಾಡಿ ಗಮನ ಸೆಳೆದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಾನಾಯ್ಕ, ಚನ್ನಗಿರಿ ಇಒ ಪ್ರಕಾಶ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ಲಿಂಗದಹಳ್ಳಿ, ಕೆರೆಬಿಳಚಿ ಗ್ರಾಪಂ ಪಿಡಿಒಗಳಿದ್ದರು.