ಜಿಲ್ಲೆ

ಸೂರ್ಯ ನಮಸ್ಕಾರ ಸಮಗ್ರ ಆರೋಗ್ಯದ ತಾರಕ ಶಕ್ತಿ

ದಾವಣಗೆರೆ: ಸೂರ್ಯ ನಮಸ್ಕಾರವು ಸಮಗ್ರ ಆರೋಗ್ಯ ಕೊಡುವ ತಾರಕ ಶಕ್ತಿಯಾಗಿದೆ ಎಂದು ಯೋಗ ಗುರು ಡಾ. ರಾಘವೇಂದ್ರ ಗುರೂಜಿ ತಿಳಿಸಿದರು. 

ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸೂರ್ಯ ನಮಸ್ಕಾರ ಯೋಗ ಶಿಬಿರದಲ್ಲಿ ಮಾತನಾಡಿದರು.

ಸೂರ್ಯ ನಮಸ್ಕಾರವು ಸರಳ, ಸುಲಭ ಹಾಗೂ ಪರಿಣಾಮಕಾರಿ ಯೋಗಾಭ್ಯಾಸ ವಿಧಾನವಾಗಿದೆ. ಪ್ರತಿದಿನ ಅದನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ಶರೀರದ ಬೆಳವಣಿಗೆ ಸರಿಯಾದ ಕ್ರಮದಲ್ಲಿ ಆಗುತ್ತದೆ ಎಂದು ಹೇಳಿದರು.

ತನು, ಮನಗಳನ್ನು ಅದು ದೃಢಗೊಳಿಸುತ್ತದೆ. ಆದ್ದರಿಂದ ಸೂರ್ಯ ನಮಸ್ಕಾರವನ್ನು ಮಕ್ಕಳು, ವಯೋವೃದ್ಧರು ಅಭ್ಯಾಸ ಮಾಡಬಹುದು. ಕಿರಿಯರಲ್ಲಿ ಉಲ್ಲಾಸ, ಉತ್ಸಾಹ ತುಂಬುತ್ತದೆ. ಹಿರಿಯ ಮತ್ತು ವಯೋವೃದ್ಧರಿಗೆ ಚೈತನ್ಯ, ಮನೋಲ್ಲಾಸವನ್ನು ತಂದುಕೊಡುತ್ತದೆ. ರಕ್ತದ ಒತ್ತಡ, ಹೃದಯ ಮತ್ತು ಶ್ವಾಸಕೋಶಗಳ ತೊಂದರೆ, ದೇಹದ ಹೆಚ್ಚುವರಿ ತೂಕ ಇದ್ದವರು ಸೂರ್ಯ ನಮಸ್ಕಾರದಿಂದ ಉತ್ತಮ ಫಲವನ್ನು ಹೊಂದಬಹುದು. ಮುಖ್ಯವಾಗಿ ಶರೀರದ ಕಾರ್ಯ ವ್ಯವಸ್ಥೆ ಚುರುಕಾಗುತ್ತದೆ. ದೈಹಿಕ ನಿಲುವು ಮತ್ತು ಚಲನಶಕ್ತಿ, ಜೀರ್ಣಕ್ರಿಯೆ, ಉಸಿರಾಟ, ವಿಸರ್ಜನಾ ವ್ಯವಸ್ಥೆ, ನರ ಸಮೂಹಗಳು ಮತ್ತು ನಿರ್ನಾಳಗ್ರಂಥಿ ಸಮೂಹ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದರು. ಶಿಬಿರವು ಫೆ. 1 ರಥಸಪ್ತಮಿ ದಿನದ ವರೆಗೆ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು ಎಂದು ಹೇಳಿದರು.

ಅಂಚೆ ಇಲಾಖೆ ಉದ್ಯೋಗಿ ವೇದಾವತಿ ಡಿ.ಎಂ.ಎಸ್. ಮಾತನಾಡಿ, ಸೂರ್ಯ ನಮಸ್ಕಾರದಿಂದ ಆರೋಗ್ಯ ಉತ್ತಮವಾಗಿರುತ್ತದೆ, ಲವಲವಿಕೆಯಿಂದ ಕೆಲಸ ಮಾಡಬಹುದು. ಉದ್ಯೋಗಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಬಿರದ ಉದ್ಘಾಟನೆಯನ್ನು ಶಿಬಿರಾರ್ಥಿಯಾದ ಬಾಲಕ ಪ್ರಶಾಂತ್ ಎಂ.ಎಂ. ನೆರವೇರಿಸಿದ. ಗೃಹಿಣಿ ಸುಭಾಷಿಣಿ ಮಂಜುನಾಥ್, ವರ್ತಕ ಕೆ.ವಿ. ಮಹಾಂತಪ್ಪ ಇದ್ದರು. ಪ್ರಾರಂಭದಲ್ಲಿ ಅಗ್ನಿಹೋತ್ರ ಸೂರ್ಯ ಹೋಮವನ್ನು ನೆರವೇರಿಸಲಾಯಿತು.