ಜಿಲ್ಲೆ

ಸೂರಣಗಿಗೆ ಮೂಲಸೌಲಭ್ಯ ಕಲ್ಪಿಸಲು ಬದ್ಧ

ಲಕ್ಷ್ಮೇಶ್ವರ: ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಹಿಂದುಳಿದ ಜನಾಂಗದವರಿಗೆ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ತಾಲೂಕಿನ ಸೂರಣಗಿ ಗ್ರಾಮದ ಜನತಾ ಪ್ಲಾಟ್​ನಲ್ಲಿ ಎಸ್​ಸಿಪಿ/ಟಿಎಸ್​ಪಿ ಯೋಜನೆಯಡಿ ಜಲಸಂಪನ್ಮೂಲ ಇಲಾಖೆಯ 75 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆಗಳು, ಚರಂಡಿ, ಶಾಲೆ, ವಿದ್ಯುತ್, ಆಶ್ರಯ ನಿವೇಶನ ಕಲ್ಪಿಸಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ ಪಪೂ ಕಾಲೇಜ್ ಸ್ಥಾಪನೆ, ಹೊಸ ಬಸ್ ನಿಲ್ದಾಣದ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರಿಗಾಗಿ ಸಮುದಾಯ ಭವನ ನಿರ್ವಿುಸಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ತಾಪಂ ಸದಸ್ಯೆ ಚನ್ನಮ್ಮ ಹಿರೇಮಠ, ಗ್ರಾಪಂ ಅಧ್ಯಕ್ಷ ಶಶಿಕಾಂತ ದಾಸರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಗ್ರಾಪಂ ಸದಸ್ಯರಾದ ಹಾಲಪ್ಪ ಸೂರಣಗಿ, ಬಸವರಾಜ ಇಟಗಿ, ಸೋಮಣ್ಣ ಲಮಾಣಿ, ಲಲಿತಾ ಲಮಾಣಿ, ಮಂಜು ಮೂಲಿಮನಿ, ಮಹೇಶ ಲಮಾಣಿ, ಪಿಡಿಒ ಎಸ್.ಎಫ್. ಹಿರೇಮಠ, ಕುಮಾರ ಬೆಟಗೇರಿ, ಖಲಂದರ ಕುರಿ, ಅಶೋಕ ಸೂರಣಗಿ, ಸಂತೋಷ ಚಕ್ರಸಾಲಿ, ನಾಗಪ್ಪ ದನಾಕಟ್ಟವರ, ಭೂಸೇನಾ ನಿಗಮದ ಅಧಿಕಾರಿ ಆರ್.ಎಸ್. ಮಾಳೋದೆಕರ, ಬಸವರಾಜ ಶೀರನಹಳ್ಳಿ, ಇತರರಿದ್ದರು.