ಗದಗ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜ.8 ರಂದು ನಟ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್ ನಿಲ್ಲಿಸುವ ಸಂದರ್ಭದಲ್ಲಿ ವಿಧ್ಯುತ ಸ್ಪರ್ಶದಿಂದಾಗಿ ಮೃತಪಟ್ಟ ಯುವಕರ ಮನೆಗಳಿಗೆ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರ ಚೆಕ್ ವಿತರಿಸಿದರು.
ಸೂರಣಗಿ ಗ್ರಾಮದಲ್ಲಿ ಜರುಗಿದ ದುರ್ಘಟನೆಯಲ್ಲಿ ಮೃತರಾದ ಹನುಮಂತಪ್ಪ.ಮಜ್ಜೂರಪ್ಪ.ಹರಿಜನ, ಮುರಳಿ ನೀಲಪ್ಪ ನಡುವಿನಮನಿ, ನವೀನ.ನೀಲಪ್ಪ.ಗಾಜಿ ಅವರುಗಳ ಕುಟುಂಬಗಳಿಗೆ ಹಾಗೂ ಗಾಯಾಳುಗಳಾದ ಮಂಜುನಾಥ.ಸಿದ್ದಪ್ಪ.ಹರಿಜನ, ಹನುಮಂತ.ಗಾಳೆಪ್ಪ.ಹರಿಜನ ಹಾಗೂ ಪ್ರಕಾಶ.ಶಿವಪ್ಪ.ಮ್ಯಾಗೇರಿ ಅವರ ಕುಟುಂಬಗಳ ನೆರವಿಗೆ ಸರ್ಕಾರದ ವತಿಯಿಂದ ಅಗತ್ಯದ ಪರಿಹಾರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಕೂಡಲೇ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿದ್ದರು.
ಸರ್ಕಾರದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ಚೆಕ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಶುಕ್ರವಾರದಂದು ಕುಟುಂಬ ಸದಸ್ಯರುಗಳಿಗೆ ವಿತರಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಸಚಿವ ಎಚ್. ಕೆ. ಪಾಟೀಲ, ಮೃತರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಮೂವರು ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಹಾಗೂ ಮೂವರು ಗಾಯಾಳುಗಳಿಗೆ ತಲಾ ಐವತ್ತು ಸಾವಿರ ಪರಿಹಾರದ ಚೆಕ್ಕುಗಳನ್ನು ಇಂದು ವಿತರಿಸಲಾಗಿದೆ.
ಘಟನೆಯಲ್ಲಿ ಇನ್ನೊಬ್ಬ ಗಾಯಾಳು ನಾಗರಾಜ ಅವರು ಇಂದು ಬೇಟಿಯಾದೆ. ಅವರಿಗೂ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಮೃತರ ಕುಟುಂಬಕ್ಕೆ ಭೂ ಒಡೆತನ ಯೊಜನೆಯಡಿ, ಭೂಮಿ ನೀಡಲು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ನಂತರ ಅವರಿಗೆ ಅನುಕಂಪದ ಆದಾರದಲ್ಲಿ ಭೂಮಿ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಿಯಮ ರೂಪಿಸಲು ಚಿಂತನೆ: ಮೆರವಣಿಗೆ, ಕಾರ್ಯಕ್ರಮ ಏರ್ಪಡಿಸುವಾಗ ಇಂತ ಘಟನೆಗಳು ಮರುಕಳಿಸಬಾರದು. ಅದಕ್ಕಾಗಿ ಬ್ಯಾನರ ಬಂಟಿಂಗ್ ತಯಾರು ಅಳತೆ ಹಾಗೂ ಅವುಗಳನ್ನು ಅಳವಡಿಸುವ ಬಗ್ಗೆ ಸೂಕ್ತ ಕಾನೂನು, ನೀತಿ ನಿಯಮ ರೂಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಲಾಗುವುದು ಎಂದರು.
ಸುರಣಗಿ ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಷಯ ತಿಳಿಸಿದಾಗ ಅವರು ವಿಷಾದ ವ್ಯಕ್ತಪಡಿಸಿ, ಅವರ ಕುಟುಂಬಕ್ಕೆ ತಕ್ಷಣ ಸರ್ಕಾರದ ಪರಿಹಾರ ನೀಡಲು ಹೇಳಿದರು ಎಂದರು.
ಸುರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈಧ್ಯರ ಹುದ್ದೆ ಖಾಲಿಯಿದೆ ಎಂದು ಪತ್ರಕರ್ತರ ಪ್ರಶ್ನೆಗೆ, ಇನ್ನು ಮೂರು ದಿನಗಳಲ್ಲಿ ವೈಧ್ಯರ ನಿಯೋಜನೆಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಜಿ.ಎಸ್. ಪಾಟೀಲ ಅವರು ಮಾತನಾಡಿ, ಸುರಣಗಿ ಘಟನೆ ವಿಷಾಧನೀಯವಾಗಿದೆ. ಮೃತರ ಕುಟುಂಬಕ್ಕೆ ಮಾದಿಗ ಅಭಿವೃದ್ಧಿ ನಿಗಮದಿಂದ ಸೌಲಭ್ಯ, ಸಹಾಯಧನ ಕೊಡಿಸುವ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೆವರಮಠ, ರಾಮಣ್ಣ ಲಮಾಣಿ, ಗಣ್ಯರಾದ ಸುಜಾತಾ ದೊಡ್ಡಮನಿ, ಚನ್ನಮ್ಮ ಬ ಕಳ್ಳಿಹಾಳ, ಬಿ.ಬಿ. ಅಸೂಟಿ, ಎಸ್.ಎನ್. ಬಳ್ಳಾರಿ, ಪ್ರಭು ಬುರಬುರೆ, ಆನಂದಸ್ವಾಮಿ ಗಡ್ಡದೆವರಮಠ, ಚನ್ನಬಸಪ್ಪ ಜಗಲಿ, ಕೊಟೆಪ್ಪ ವರ್ದಿ, ಪ್ರಕಾಶ ಕಳ್ಳಿಹಾಳ, ವಿರುಪಾಕ್ಷಪ್ಪ ಸಿರನಹಳ್ಳಿ, ಪಕ್ಕಿರೇಶ ಮ್ಯಾಟಣ್ಣನವರ, ಶಂಕ್ರಣ್ಣ ಶಿರನಹಳ್ಳಿ, ಚಂದ್ರಶೇಖರ ಶಿರನಹಳ್ಳಿ, ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್, ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ. ಎಸ್. ನೇಮಗೌಡ, ತಹಶಿಲ್ದಾರ ವಾಸುದೇವ, ತಾ.ಪಂ ಇಒ ಕೃಷ್ಣ ದರ್ಮರ ಸೇರಿದಂತೆ ಇತರರು ಇದ್ದರು.
ಘಟನೆ ಹಿನ್ನಲೆ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕರ ನಗರದ ಹತ್ತಿರ ಚಿತ್ರನಟ ಯಶ್ ಅವರ ಹುಟ್ಟುಹಬ್ಬದ ನಿಮಿತ್ತ ಯಶ್ ಅವರ ಭಾವಚಿತ್ರದ ಬೃಹತ ಕಟೌಟ್ ಸಾರ್ವಜನಿಕವಾಗಿ ಪ್ರದರ್ಶಿಸಲು ರಾತ್ರಿ 12.30 ಗಂಟೆಗೆ ಕಟ್ಟುವ ಸಂದರ್ಭದಲ್ಲಿ ವಿಧ್ಯುತ್ ತಂತಿ ಸ್ಪರ್ಷದಿಂದಾಗಿ 3 ಜನ ಯುವಕರಾದ ಹನುಮಂತಪ್ಪ.ಮಜ್ಜೂರಪ್ಪ.ಹರಿಜನ, ಮುರಳಿ ನೀಲಪ್ಪ ನಡುವಿನಮನಿ, ನವೀನ.ನೀಲಪ್ಪ.ಗಾಜಿ ಅವರುಗಳು ಸ್ಥಳದಲ್ಲಿಯೇ ಮೃತರಾಗಿದ್ದು ಮಂಜುನಾಥ.ಸಿದ್ದಪ್ಪ.ಹರಿಜನ, ಹನುಮಂತ.ಗಾಳೆಪ್ಪ.ಹರಿಜನ ಹಾಗೂ ಪ್ರಕಾಶ.ಶಿವಪ್ಪ.ಮ್ಯಾಗೇರಿ ಅವರುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.